ಇಸ್ಲಾಮಿ-ಬೈತುಲ್-ಮಾಲ್ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ

ಚಿಕ್ಕಮಗಳೂರು, ಜು.18:ನಗರದ ಸರ್ಕಾರಿ ಉರ್ದು ಇಂಗ್ಲೀಷ್ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಇಸ್ಲಾಮಿ-ಬೈತ್‌ಉಲ್-ಮಾಲ್ ಸಂಸ್ಥೆಯ ವತಿಯಿಂದ ನೋಟ್ ಪುಸ್ತಕ, ಲೇಖನ ಸಾಮಗ್ರಿಗಳನ್ನು ಶಾಲಾ ಸಮಿತಿ ಗೌರವಾಧ್ಯಕ್ಷ ನಝರುಲ್ಲಾ ಶರೀಫ್ ಅಧ್ಯಕ್ಷತೆಯಲ್ಲಿ ವಿತರಿಸಲಾಯಿತು.
ನಗರಸಭಾ ಸದಸ್ಯ ತೇಜಕುಮಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪುಸ್ತಕ ವಿತರಣೆ ಸಂತಸದ ಸಂಗತಿ. ಮಕ್ಕಳ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯ. ಇಸ್ಲಾಮಿ-ಬೈತ್‌ಉಲ್-ಮಾಲ್ ಹಲವು ವರ್ಷಗಳಿಂದ ಈ ಶಾಲೆಯನ್ನು ದತ್ತು ಪಡೆದು ಅಗತ್ಯ ನೆರವು ನೀಡುತ್ತಿರುವುದು ಮಾದರಿ ಎಂದು ನುಡಿದರು.
ಬೈತ್‌ಉಲ್ ಮಾಲ್ ಸದಸ್ಯ ಬಿ.ಅಮ್ಜದ್ ಮಾತನಾಡಿ, ಉರ್ದುಭಾಷೆಯ ಬಗ್ಗೆ ಕೀಳರಿಮೆ ಬೇಡ. ಆಸಕ್ತಿಯಿಂದ ಮಕ್ಕಳು ಕಲಿಯಬೇಕು. ಭಾಷೆ ಸಂವಾದಕ್ಕೆ, ಪರಸ್ಪರ ಅರ್ಥಮಾಡಿಕೊಳ್ಳಲು ಇದೆ. ಬೇರೊಂದಕ್ಕೆ ಗಂಟುಹಾಕುವ ಅಗತ್ಯವಿಲ್ಲ. ನಾಡಿನ ಸಾಂಸ್ಕೃತಿಕ ಮತ್ತು ಸಾಹಿತ್ಯಕ್ಕೆ ಉರ್ದು ಅಪಾರ ಕೊಡುಗೆ ನೀಡಿದೆ. ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಭಾರತ ಗಟ್ಟಿಯಾಗಿರಲು ಉರ್ದು ಉಳಿಯಬೇಕು ಎಂದು ಹೇಳಿದರು.
ಇಂಗ್ಲೀಷ್ ಹೊರತುಪಡಿಸಿ ಭಾರತದ 17ಭಾಷೆಗಳಿಗೆ ಸಂವಿಧಾನಬದ್ಧವಾಗಿ ರಾಷ್ಟ್ರೀಯಭಾಷೆ ಸ್ಥಾನಮಾನ ನೀಡಲಾಗಿದೆ. ಯಾವುದೇ ಒಂದು ಭಾಷೆಯನ್ನು ಮಾತ್ರ ರಾಷ್ಟ್ರೀಯ ಭಾಷೆ ಎಂದು ಹೇರಲು ಸಾಧ್ಯವಿಲ್ಲ. ಉರ್ದು ಸೇರಿದಂತೆ ಪ್ರಾದೇಶಿಕ ಭಾಷೆಗಳನ್ನು ಸಂರಕ್ಷಿಸುವ ಅನಿವಾರ್ಯತೆ ಪೋಷಕರು ಅರ್ಥಮಾಡಿಕೊಳ್ಳಬೇಕು. ಜಾಗತಿಕವಾಗಿ ಇಂಗ್ಲೀಷ್ ಭ್ರಮಾಲೋಕದಲ್ಲಿ ಕನ್ನಡ, ಉರ್ದು ಸೇರಿದಂತೆ ಸ್ಥಳೀಯ ಭಾಷೆಗಳು ಕೊಚ್ಚಿಹೋಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ನಝರುಲ್ಲಾ ಷರೀಫ್ ಅಧ್ಯಕ್ಷತೆ ವಹಿಸಿ ಮಾತನಾಡಿ, 1905ರಲ್ಲಿ ಮುಸ್ಲಿಮ್ ಹೆಣ್ಣುಮಕ್ಕಳಿಗಾಗಿ ಆರಂಭಿಸಿದ ಈ ಶಾಲೆಗೆ ದೀರ್ಘ ಇತಿಹಾಸವಿದೆ. 1974ರಲ್ಲಿ ರಾಜ್ಯದಲ್ಲೆ ಪ್ರಥಮವಾಗಿ ಉರ್ದುಶಾಲೆಯಲ್ಲಿ ಆಂಗ್ಲಮಾಧ್ಯಮಕ್ಕೆ ಇಲ್ಲಿ ಅನುಮತಿ ಪಡೆಯಲಾಯಿತು. ಶಾಲಾ ರಿಪೇರಿ ಸೇರಿದಂತೆ ಎಲ್‌ಕೆಜಿ ಶಿಕ್ಷಣ, ಕಂಪ್ಯೂಟರ್ ತರಬೇತಿ ಬೈತ್‌ಉಲ್-ಮಾಲ್ ನೀಡುತ್ತಿದೆ. ಸುಣ್ಣಬಣ್ಣ ರಕ್ಷಣೆಯ ಜೊತೆಗೆ ಮಕ್ಕಳಿಗೆ ಹೆಚ್ಚುವರಿ ಸಮವಸ್ತ್ರ, ಶೂ, ಪುಸ್ತಕ, ನೋಟ್‌ಪುಸ್ತಕ ಮತ್ತಿತರ ಸೌಕರ್ಯಗಳನ್ನು ಒದಗಿಸಿ 10 ವರ್ಷಗಳಿಂದ ನೆರವು ನೀಡುತ್ತಿದೆ ಎಂದರು.
ಆಝಂ ಮಸೀದಿ ಮೌಲಾನಾ ಔರಂಗಜೇಬ್ ಅಲಂಗೀರ ಮಾತನಾಡಿದರು. ಇಸ್ಲಾಮಿ-ಬೈತ್‌ಉಲ್-ಮಾಲ್ ಉಪಾಧ್ಯಕ್ಷ ನಜ್ಹೀರ್‌ಅಹಮ್ಮದ್, ಕಾರ್ಯದರ್ಶಿ ಮುಸ್ತಾಕ್ ಅಹಮ್ಮದ್, ಶೈಕ್ಷಣಿಕ ಸಮಿತಿ ಅಧ್ಯಕ್ಷ ಷೇಕ್ ಅಹಮ್ಮದ್ 3,000 ನೋಟ್ ಪುಸ್ತಕ ವಿತರಿಸಿದರು. ಇದೇ ಸಂದರ್ಭದಲ್ಲಿ 24,000 ರೂ.ವೆಚ್ಚದ ಎಂಟು ಕಬ್ಬಿಣ ಟೇಬಲ್‌ಗಳನ್ನು ಕೊಡುಗೆ ನೀಡಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷೆ ತಬಸ್ಸುಮ್, ಸದಸ್ಯರಾದ ಜಿಯತ್ ಉನ್ನೀಸಾ, ಶಬೀರ್ ಅಹಮ್ಮದ್, ಹುಸೇನ್, ಶಾಲಾದೈಹಿಕ ಶಿಕ್ಷಕ ಎಸ್.ಎಂ.ಮಹೇಶ್ವರಪ್ಪ, ಮುಖ್ಯಶಿಕ್ಷಕಿ ಷಹಜಾದಿ ಬಿ ಮತ್ತಿತರರಿದ್ದರು.







