ಭಟ್ಕಳದ ಉದ್ಯಮಿಯಿಂದ ಶಾಲೆಗಳಿಗೆ ನೆರವು

ಭಟ್ಕಳ, ಜು.18: ಭಟ್ಕಳದ ಉದ್ಯಮಿ ಜಾನ್ ಅಬ್ದುಲ್ ರೆಹಮಾನ್ ರವರು ತಾಲೂಕಿನ ವಿವಿಧ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಣಕಾಸಿನ ನೆರವು ನೀಡುತ್ತಿದ್ದು, ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡಭಟ್ಕಳ, ಬೆಣಂದೂರು, ಸಬ್ಬತ್ತೆ ಶಾಲೆಗಳಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗಳಿಗೆ ಸಹಾಯ ಹಸ್ತ ಚಾಚಿದರು.
ತಾಲೂಕಿನ ಮೂಢಭಟ್ಕಳ ಕಿರಿಯ ಪ್ರಾಥಮಿಕ ಶಾಲೆಯ 50 ವಿದ್ಯಾರ್ಥಿಗಳಿಗೆ, ಬೆಣಂದೂರು ಶಾಲೆಯ 30 ವಿದ್ಯಾರ್ಥಿಗಳಿಗೆ ಹಾಗೂ ಹೇರೂರು ಶಾಲೆ 42 ವಿದ್ಯಾರ್ಥಿಗಳಿಗೆ ಕೊಡೆಗಳನ್ನು ಖರೀದಿಸಲು ತಲಾ 200 ರೂಪಾಯಿಯಂತೆ ಪ್ರತಿ ವಿದ್ಯಾರ್ಥಿಗೆ ನೀಡಿದರು. ಮಳೆಗಾಲದಲ್ಲಿ ಮಕ್ಕಳಿಗೆ ಅವಶ್ಯಕವಾದ ಛತ್ರಿ ಇಲ್ಲದೇ ಹಲವು ಬಾರಿ ಶಾಲೆಗೆ ಬರುವುದಕ್ಕೆ ತೊಂದರೆಯಾಗುತ್ತದೆ. ಕೊಡೆಯಿಲ್ಲದೇ ಶಾಲೆಗೆ ಬಾರದೇ ಇರುವ ಪ್ರಸಂಗ ಬರುವುದು ಬೇಡ ಎಂದು ಧನ ಸಹಾಯ ಮಾಡಿದ್ದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು. ಬೆಣಂದೂರು ಹಾಗೂ ಹೇರೂರು ಶಾಲೆಗೆ ಕುಡಿಯುವ ನೀರಿನ ವಾಟರ್ ಫಿಲ್ಟರ್ ಖರೀದಿಗೆ ತಲಾ 10 ಸಾವಿರ ರೂಪಾಯಿಗಳನ್ನು ನೀಡಿದರು.
ಈ ಸಂಧರ್ಭದಲ್ಲಿ ಪುರಸಭಾ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ, ಉಪಾಧ್ಯಕ್ಷ ಕೆ.ಎಮ್. ಅಷ್ಪಾಕ್, ತಂಜೀ ಸಂಸ್ಥೆಯ ಜನರಲ್ ಸೆಕ್ರೆಟರಿ ಮೊಹಿದ್ದೀನ್ ಅಲ್ತಾಫ್ ಖರೂರಿ, ಯೂತ್ ಫೆಡರೇಶನ್ ಅಧ್ಯಕ್ಷ ಇಮ್ತಿಯಾಝ್ ಉದ್ಯಾವರ್, ಬಷೀರ್ ದಾಮ್ದಾ, ಇಷಾದ್ ಅಬ್ದುಲ್ ಸಮೀರ್ ಖೋಲಾ, ಖತೀಬ್, ಭಟ್ಕಳ ತಾಲುಕಾ ಕಬಡ್ಡಿ ಅಸೋಶಿಯೇಶನ್ ಕಾರ್ಯದರ್ಶಿ ಶ್ರೀಧರ ನಾಯ್ಕ, ಮೂಢಭಟ್ಕಳ ಶಾಲಾಭಿವೃದ್ಧಿ ಅಧ್ಯಕ್ಷ ವೆಂಕಟೇಶ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.







