ಬಂಧೀಖಾನೆ ಎಡಿಜಿಪಿ ಎನ್.ಎಸ್.ಮೇಘರಿಕ್ ಅಧಿಕಾರ ಸ್ವೀಕಾರ

ಬೆಂಗಳೂರು, ಜು.18: ಬಂಧೀಖಾನೆ ಇಲಾಖೆಯ ಎಡಿಜಿಪಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಎನ್.ಎಸ್.ಮೇಘರಿಕ್ ಇಂದು ಅಧಿಕಾರ ಸ್ವೀಕರಿಸಿದರು. ಪರಪ್ಪನ ಅಗ್ರಹಾರದಲ್ಲಿ ಅಕ್ರಮ ನಡೆಯುತ್ತಿದೆ ಎನ್ನುವ ಆರೋಪ ಕೇಳಿಬಂದ ಬಳಿಕ ವರ್ಗಾವಣೆಗೊಂಡ ಡಿಜಿ ಎಚ್.ಎನ್.ಸತ್ಯನಾರಾಯಣರಾವ್ ಅವರು ಮಂಗಳವಾರ ಮಧ್ಯಾಹ್ನ ನಗರದ ಶೇಷಾದ್ರಿ ರಸ್ತೆಯಲ್ಲಿರುವ ಕಾರಾಗೃಹ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಮೇಘರಿಕ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಬಳಿಕ ಇಬ್ಬರು ಅಧಿಕಾರಿಗಳು ಅರ್ಧಗಂಟೆಗೂ ಅಧಿಕ ಕಾಲ ಸಮಾಲೋಚನೆ ನಡೆಸಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಂಧೀಖಾನೆ ನೂತನ ಎಡಿಜಿಪಿ ಎನ್.ಎಸ್.ಮೇಘರಿಕ್, ರಾಜ್ಯ ಸರಕಾರದ ಆದೇಶದಂತೆ ಅಧಿಕಾರ ಸ್ವೀಕರಿಸಿದ್ದೇನೆ. ಕಾರಾಗೃಹ ಇಲಾಖೆಯ ಕಾರ್ಯವೈಖರಿ ಬಗ್ಗೆ ಸ್ವಲ್ಪ ಮಟ್ಟಿಗೆ ಅನುಭವ ಇದೆ. ಜತೆಗೆ ಇದೇ ಪರಪ್ಪನ ಅಗ್ರಹಾರ ಕಾರಾಗೃಹದ ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದ ಸಮಿತಿಯ ಸದಸ್ಯನಾಗಿದ್ದೇ ಎಂದು ಹೇಳಿದರು.
ಕಾರಾಗೃಹದಲ್ಲಿ ನಡೆದ ಅಕ್ರಮದ ಬಗ್ಗೆ ಮಾಹಿತಿ ಇದೆ. ಅಕ್ರಮದ ಬಗ್ಗೆ ಈಗಾಗಲೇ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ತನಿಖೆ ನಡೆಸುತ್ತಿದ್ದು, ಅವರಿಗೆ ಅಗತ್ಯ ಮಾಹಿತಿಯನ್ನು ಒದಗಿಸುತ್ತೇನೆ ಎಂದ ಅವರು, ಜೈಲಿನಲ್ಲಿ ನಾಲ್ಕು ಸಾವಿರ ಮಂದಿ ಕೈದಿಗಳಿಗೆ ಕೇವಲ ನೂರಾರು ಮಂದಿ ಸಿಬ್ಬಂದಿ ಮಾತ್ರ ಇದ್ದಾರೆ ಎಂಬ ಮಾಹಿತಿಯಿದೆ. ಈ ಹಿನ್ನೆಲೆಯಲ್ಲಿ ಇನ್ನು ಒಂದೆರಡು ದಿನಗಳಲ್ಲಿ ಜೈಲಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಅರಿತು ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ ಎಂದು ಮೇಘರಿಕ್ ನುಡಿದರು.
ಇದೇ ವೇಳೆ ಕಚೇರಿಯಲ್ಲಿದ್ದ ತಮ್ಮ ಖಾಸಗಿ ವಸ್ತುಗಳು ಹಾಗೂ ಕಡತಗಳನ್ನು ಕಾರಾಗೃಹ ಇಲಾಖೆಯ ಸಿಬ್ಬಂದಿಗಳು ಎಚ್.ಎನ್.ಸತ್ಯನಾರಾಯಣರಾವ್ ಅವರ ಕಾರಿನಲ್ಲಿಟ್ಟರು.







