ರಸ್ತೆ ಅಪಘಾತ: ತಹಶೀಲ್ದಾರ್ ರಿಗೆ ಗಾಯ

ಕುಂದಾಪುರ, ಜು.18: ಕುಂದಾಪುರ ತಹಶೀಲ್ದಾರ್ ಅವರ ಇಲಾಖಾ ಜೀಪು ಇಂದು ಅಪರಾಹ್ನ 1 ಗಂಟೆ ಸುಮಾರಿಗೆ ಕಂಡ್ಲೂರು ದೂಪದಕಟ್ಟೆ ಎಂಬಲ್ಲಿ ಅಪಘಾತಕ್ಕೀಡಾಗಿ ತಹಶೀಲ್ದಾರ್ ಜಿ.ಎಂ.ಬೋರ್ಕರ್ ಹಾಗೂ ಇತರರು ಗಾಯಗೊಂಡ ಬಗ್ಗೆ ವರದಿಯಾಗಿದೆ.
ತಹಶೀಲ್ದಾರ್ ಬೋರ್ಕರ್ ಕರ್ತವ್ಯದ ಹಿನ್ನೆಲೆಯಲ್ಲಿ ಸಿದ್ಧಾಪುರ ಕಡೆಯಿಂದ ಕುಂದಾಪುರ ಕಡೆಗೆ ತನ್ನ ಇಲಾಖಾ ಮಹೀಂದ್ರ ಬೋಲೆರೊ ಜೀಪಿನಲ್ಲಿ ಇತರ ಸಿಬ್ಬಂದಿಗಳೊಂದಿಗೆ ಬರುತ್ತಿದ್ದಾಗ ಎದುರಿನಿಂದ ಬಂದ ಓಮ್ನಿ ಕಾರು ಜೀಪಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಜೀಪಿನಲ್ಲಿದ್ದ ತಹಶೀಲ್ದಾರ್ ಸಣ್ಣಪುಟ್ಟ ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅದೇ ರೀತಿ ಜೀಪಿನಲ್ಲಿದ್ದ ಚಾಲಕ ಹಾಗೂ ಇತರ ಸಿಬ್ಬಂದಿಗಳಿಗೂ ಸಣ್ಣಪುಟ್ಟ ಗಾಯಗಳಾಗಿರುವ ಬಗ್ಗೆ ತಿಳಿದುಬಂದಿದೆ. ಅಪಘಾತದಿಂದ ಇಲಾಖಾ ಜೀಪು ಜಖಂಗೊಂಡಿದೆ. ಓಮ್ನಿಯಲ್ಲಿ ಚಾಲಕ ಒಬ್ಬನೇ ಇದ್ದು, ಆತನಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





