ವರದಕ್ಷಿಣೆ ಕಿರುಕುಳ: ಪತಿಗೆ 6 ತಿಂಗಳು ಜೈಲುಶಿಕ್ಷೆ
ಉಡುಪಿ, ಜು.18: ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ವರ ದಕ್ಷಿಣೆ ಹಣ ನೀಡುವಂತೆ ಕೊಲೆಬೆದರಿಕೆಯೊಡ್ಡಿದ ಪತಿಗೆ ಉಡುಪಿ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಿಟ್ಟೂರಿನ ರಂಗನಾಥ ಬಿ.ರಾವ್(32) ಶಿಕ್ಷೆಗೆ ಗುರಿಯಾದ ಅಪರಾಧಿ. ಈತ 2010ರ ಎ.9ರಂದು ಮಂದಾರ್ತಿಯ ವಿನೂತ ಎಂಬವರನ್ನು ಮದುವೆ ಯಾಗಿದ್ದು, ನಂತರ ಆತ ಆಕೆಗೆ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡಿ ವರದಕ್ಷಿಣೆ ಹಣವನ್ನು ಕೊಟ್ಟಿಲ್ಲವೆಂದು ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿದ್ದನು. ಹಣ ತರದೆ ಮನೆಗೆ ಬರುವುದು ಬೇಡ ಎಂದು ತವರು ಮನೆಗೆ ಕಳಿಸಿದ್ದಲ್ಲದೆ ಮತ್ತೆ ಆಕೆಯನ್ನು ತನ್ನ ಮನೆಗೆ ಕರೆಯಿಸಿ ದೂರು ನೀಡಿದ ಬಗ್ಗೆ ಕೇಳಿ ಕೊಲೆಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.
ಈ ಬಗ್ಗೆ ವಿನೂತ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ನ್ಯಾಯಾ ಲಯದ ಆದೇಶದಂತೆ ಆಗಿನ ಉಡುಪಿ ನಗರ ಠಾಣೆ ಉಪನಿರೀಕ್ಷಕ ಎ.ಸಂಪತ್ ಕುಮಾರ್ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾ ರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣವು ಉಡುಪಿ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯ ವನ್ನು ಮತ್ತು ವಾದ ವಿವಾದವನ್ನು ಆಲಿಸಿ ಆರೋಪಿ ವಿರುದ್ಧ ಮೇಲಿನ ಆರೋಪ ಸಾಬೀತಾಗಿದೆಂದು ತೀರ್ಮಾನಿಸಿ ನ್ಯಾಯಾಧೀಶ ಮಂಜುನಾಥ್ ಎಂ.ಎಸ್. ಆರೋಪಿಗೆ ಭಾ.ದಂ.ಸಂ ಕಲಂ 498(ಎ), 506 ಮತ್ತು ಕಲಂ ವರದಕ್ಷಿಣೆ ನಿಷೇಧ ಕಾಯ್ದೆ ಕಲಂ 4ರಡಿ ಆರು ತಿಂಗಳ ಶಿಕ್ಷೆ ವಿಧಿಸಿ ಜು.14ರಂದು ತೀರ್ಪು ನೀಡಿದರು.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮುಮ್ತಾಝ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.







