ಸಂಘಪರಿವಾರದ ನಾಯಕರ ಮೇಲಿನ ದೌರ್ಜನ್ಯ ವಿರೋಧಿಸಿ ಮನವಿ
ಉಡುಪಿ, ಜು.18: ರಾಜ್ಯದಲ್ಲಿ ಸಂಘಪರಿವಾರ ಮುಖಂಡರ ಹತ್ಯೆ ಹಾಗೂ ಬಂಧನವನ್ನು ವಿರೋಧಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಉಡುಪಿ ಜಿಲ್ಲೆ ಇಂದು ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ 22 ಸಂಘಪರಿವಾರದ ಕಾರ್ಯಕರ್ತರ ಹತ್ಯೆ ನಡೆದಿದ್ದು, 15ಕ್ಕು ಹೆಚ್ಚು ಕಾರ್ಯಕರ್ತರ ಕೊಲೆಗೆ ಯತ್ನ ನಡೆದಿದೆ. ಕಳೆದ 55 ದಿನಗಳಿಂದ ದ.ಕ. ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಬಜರಂಗದಳ ನಾಯಕರ ವಿರುದ್ಧ ವಿನಃ ಕಾರಣ ಪ್ರಕರಣ ದಾಖಲಿಸಿ ಅವರ ಮನೆಯವರನ್ನು ಹೆದರಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿ ದ.ಕ. ಜಿಲ್ಲೆಯಲ್ಲಿ ಶಾಂತಿ ನೆಲೆಸುವಂತೆ ಪೊಲೀಸ್ ವ್ಯವಸ್ಥೆಗೆ ಸ್ವಾತಂತ್ರವಾಗಿ ಕರ್ತವ್ಯ ನಿರ್ವಹಿಸಲು ಮುಖ್ಯಮಂತ್ರಿ ಹಾಗೂ ಮುಖ್ಯಕಾರ್ಯದರ್ಶಿಗಳಿಗೆ ಆದೇಶ ನೀಡಬೇಕು ಎಂದು ವಿಎಚ್‌ಪಿ ರಾಜ್ಯಪಾಲರನ್ನು ಮನವಿಯಲ್ಲಿ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ವಿಎಚ್‌ಪಿ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ಉಡುಪಿ ನಗರ ಅಧ್ಯಕ್ಷ ಸಂತೋಷ್ ಸುವರ್ಣ, ಬಜರಂಗದಳ ವಿಭಾಗ ಸಹ ಸಂಚಾಲಕ ಸುನೀಲ್ ಕೆ.ಆರ್. ಮೊದಲಾದವರು ಉಪಸ್ಥಿತರಿದ್ದರು





