ಸೌರಶಕ್ತಿ ಉಪಕರಣಗಳಿಗೆ ಸಾಲ ನೀಡಲು ಸಮಸ್ಯೆಗಳಿಲ್ಲ: ಹೆಗ್ಡೆ

ಉಡುಪಿ, ಜು.18: ಜನರ ಹೆಚ್ಚುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ನಿರಂತರ ಹಾಗೂ ವಿಪುಲವಾಗಿ ಲಭ್ಯವಿರುವ ಇಂಧನ ಸೌರಶಕ್ತಿಯಾಗಿದ್ದು, ಸೌರಶಕ್ತಿ ಉಪಕರಣಗಳಿಗೆ ಸಾಲ ನೀಡಲು ಬ್ಯಾಂಕ್‌ಗಳಿಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಸಿಂಡಿಕೇಟ್ ಬ್ಯಾಂಕಿನ ಉಡುಪಿ ಪ್ರಾದೇಶಿಕ ಕಚೇರಿಯ ಡಿಜಿಎಂ ಎಸ್.ಎಸ್.ಹೆಗ್ಡೆ ಹೇಳಿದ್ದಾರೆ.
ಜಿಲ್ಲೆಯ ಲೀಡ್‌ಬ್ಯಾಂಕ್ ಆದ ಸಿಂಡಿಕೇಟ್ ಬ್ಯಾಂಕ್ ಹಾಗೂ ಸೆಲ್ಕೋ ಫೌಂಡೇಷನ್‌ಗಳ ಜಂಟಿ ಆಶ್ರಯದಲ್ಲಿ ಸಿಂಡಿಕೇಟ್ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಸಭಾಭವನದಲ್ಲಿ ಇಂದು ನಡೆದ ‘ವಿಕೇಂದ್ರಿಕೃತ ನವೀಕರಿಸಬಹುದಾದ ಇಂಧನಕ್ಕೆ ಹಣಕಾಸಿನ ನೆರವು’ ವಿಷಯದ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನವೀಕರಿಸಬಹುದಾದ ಇಂಧನಗಳಲ್ಲಿ ಗಾಳಿ ವಿದ್ಯುತ್, ಅಲೆಗಳಿಂದ ವಿದ್ಯುತ್‌ಗೆ ಹೋಲಿಸಿದರೆ ಭಾರತ ಸೌರ ವಿದ್ಯುತ್‌ನ್ನು ಹೆಚ್ಚು ನೆಚ್ಚಿಕೊಳ್ಳಬಹುದಾಗಿದೆ. ಮಳೆಗಾಲದ ಮೂರು ತಿಂಗಳನ್ನು ಹೊರತು ಪಡಿಸಿದರೆ ಉಳಿದ 9 ತಿಂಗಳು ಇವು ಧಾರಾಳವಾಗಿ, ನಿರಂತರವಾಗಿ ದೊರೆಯುತ್ತದೆ. ಅವುಗಳನ್ನು ಬಳಸಿಕೊಂಡು ವಿದ್ಯುತ್ ಬೇಡಿಕೆಯನ್ನು ಬಹುಪಾಲು ಪೂರೈಸಲು ಸಾದ್ಯವಿದೆ ಎಂದವರು ತಿಳಿಸಿದರು.
ಸೆಲ್ಕೋ ಫೌಂಡೇಷನ್‌ನ ಸಿಒಒ ಮೋಹನ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ನವೀಕರಿಸಬಹುದಾದ ವಿದ್ಯುತ್‌ನ ಲಭ್ಯತೆಯ ವಿಷಯದಲ್ಲಿ ಭಾರತ, ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಅವುಗಳ ಬಳಕೆ, ಉಪಯೋಗದ ವಿಷಯದಲ್ಲಿ ನಾವು 127ನೇ ಸ್ಥಾನದಷ್ಟು ಕೆಳಗಿದ್ದೇವೆ. ಪ್ರಕೃತಿ ನಮಗೆ ಧಾರಾಳವಾಗಿ ನೀಡಿರುವ ಈ ಇಂಧನವನ್ನು ನಾವು ಬಳಸಿಕೊಳ್ಳಲು ಮುಂದಾಗಬೇಕು ಎಂದರು.
ಸೌರಶಕ್ತಿ ಕ್ಷೇತ್ರದಲ್ಲಿ ಉದ್ಯೋಗಾವಕಾಶವೂ ಚೆನ್ನಾಗಿದ್ದು, ಮುಂದಿನ ಹತ್ತು ವರ್ಷಗಳಲ್ಲಿ 10 ಲಕ್ಷಕ್ಕೂ ಅಧಿಕ ಉದ್ಯೋಗ ಲಭ್ಯವಿರುತ್ತದೆ. ಪ್ರಸಕ್ತ ಭಾರತದ ವಿದ್ಯುತ್ ಬೇಡಿಕೆಯ ಶೇ.53ರಷ್ಟು ವಿದ್ಯುತ್ ಕಲ್ಲಿದ್ದಲು ಮೂಲದಿಂದ ಉತ್ಪಾದನೆಯಾಗುತಿದ್ದು, ಅದಿನ್ನು 15-20 ವರ್ಷಗಳಲ್ಲಿ ಮುಗಿಯಲಿದೆ. ಆಗ ನಾವು ಸೌರವಿದ್ಯುತ್‌ನ್ನೇ ಅವಲಂಬಿಸಬೇಕಾಗಿದೆ ಎಂದರು. ಸೌರವಿದ್ಯುತ್‌ಗೆ ಬ್ಯಾಂಕುಗಳು ಈವರೆಗೆ ನೀಡಿದ ಸಾಲದಲ್ಲಿ ಶೇ.99ರಷ್ಟು ಮರುಪಾವತಿಯಾದ ದಾಖಲೆ ಇದ್ದು, ಇದರಲ್ಲಿ ಶೇ.1ರಷ್ಟು ಮಾತ್ರ ಎನ್‌ಪಿಎ ಇದೆ ಎಂಬುದು ದಾಖಲೆಗಳಿಂದ ತಿಳಿದುಬರುತ್ತದೆ. ಏನೇ ಇದ್ದರೂ ಇಂಧನದಲ್ಲಿ ಭಾರತ ಸ್ವಾವಲಂಬಿಯಾಗಬೇಕಿದ್ದರೆ ಸೌರಶಕ್ತಿಯನ್ನು ನಾವು ನೆಚ್ಚಿಕೊಳ್ಳಬೇಕಿದ್ದು, ಜನರಲ್ಲಿ ಅದನ್ನು ಜನಪ್ರಿಯಗೊಳಿಸಬೇಕಿದೆ ಎಂದರು.
ಸಿಂಡಿಕೇಟ್ ಬ್ಯಾಂಕಿನ ಡಿಜಿಎಂ ಬಿ.ಆರ್.ಹಿರೇಮಠ್, ಉಡುಪಿ- ಮಂಗಳೂರು ನಬಾರ್ಡ್‌ನ ಡಿಡಿಎಂ ರಮೇಶ್, ಸಿಂಡಿಕೇಟ್ ಬ್ಯಾಂಕಿನ ಎಜಿಎಂ ರಾಜೇಶ್, ಸೆಲ್ಕೊದ ಸ್ವಾತಿ ಮುರಳಿ ಉಪಸ್ಥಿತರಿದ್ದರು.
ಜಿಲ್ಲೆಯ ಲೀಡ್ ಬ್ಯಾಂಕ್ ಮ್ಯಾನೇಜರ್ ಫ್ರಾನ್ಸಿಸ್ ಬೋರ್ಗಿಯಾ ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಸೆಲ್ಕೊದ ಸಂಪನ್ಮೂಲ ವ್ಯಕ್ತಿಯಾದ ರಮಾನಾಥ ಎನ್.ದೀಕ್ಷಿತ್ ಕಾರ್ಯಕ್ರಮ ನಿರ್ವಹಿಸಿದರು.







