ಬರ ಸ್ಥಿತಿ ಕಾರಣ ವಿಶ್ವ ಕನ್ನಡ ಸಮ್ಮೇಳನ ಬೇಡ: ಪ್ರೊ.ಚಂಪಾ ಆಕ್ಷೇಪ
‘ಹಾಡುವ ಸಭೆಯಲ್ಲಿ ನರಳುವುದುಂಟೇ’
.jpg)
ಬೆಂಗಳೂರು, ಜು. 18: ‘ಹಾಡುವ ಸಭೆಯಲ್ಲಿ ನರಳುವುದುಂಟೇ’ ಎಂಬ ವರಕವಿ ಬೇಂದ್ರ ಅವರ ಕವನದ ಸಾಲನ್ನು ಉಲ್ಲೇಖಿಸಿದ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಚಂಪಾ, ವಿಶ್ವ ಕನ್ನಡ ಸಮ್ಮೇಳನದ ಪರಿಕಲ್ಪನೆ ದೊಡ್ಡದು. ಅದು ಮನೆ ಹಬ್ಬವಲ್ಲ, ಊರ ಹಬ್ಬ. ಬರ ಸ್ಥಿತಿ ಹಿನ್ನೆಲೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಬೇಡ ಎಂದು ಆಕ್ಷೇಪಿಸಿದ್ದಾರೆ.
ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮೊದಲನೆ ವಿಶ್ವ ಕನ್ನಡ ಸಮ್ಮೇಳನ 1985ರಲ್ಲಿ ನಡೆದಿದ್ದು, ಎರಡನೆ ವಿಶ್ವ ಕನ್ನಡ ಸಮ್ಮೇಳನ 2011ರಲ್ಲಿ ನಡೆದಿದೆ. ಅಂದರೆ 26ವರ್ಷಗಳ ನಂತರ. ಆದರೆ, ಇದೀಗ ಮೂರನೆ ವಿಶ್ವ ಕನ್ನಡ ಸಮ್ಮೇಳನ 2017ರಲ್ಲಿ, ಕೇವಲ 6ವರ್ಷಗಳ ಅವಧಿಯಲ್ಲಿ ನಡೆಸಲು ಅವಸರವೇಕೆ? ತುರ್ತು ಅನಿವಾರ್ಯತೆ ಏಕೆ? ಎಂದು ಪ್ರಶ್ನಿಸಿದರು.
ಮೊದಲನೆ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟಕರು ಪೂರ್ವ ಪ್ರಾಥಮಿಕ ಶಾಲೆಯಿಂದ ಸ್ನಾತಕ ಪದವಿಯವರೆಗೆ ಕನ್ನಡ ಭಾಷೆಯಲ್ಲಿ ವ್ಯಾಸಂಗ ಮಾಡಬೇಕು ಎಂದು ಬಯಸಿದರೆ, ಎರಡನೆ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟಕರು ಅದಕ್ಕೆ ತದ್ವಿರುದ್ದ ಹೇಳಿಕೆ ನೀಡಿ ಆಂಗ್ಲ ಭಾಷೆಯನ್ನು ಬೆಂಬಲಿಸಿ ಕಾರ್ಪೋರೇಟ್ ಸಂಸ್ಕೃತಿಗೆ ಪ್ರೋತ್ಸಾಹ ನೀಡಿದರು ಎಂದು ಚಂಪಾ ದೂರಿದರು.
ರಾಜ್ಯವು ಬರದ ಛಾಯೆಯಲ್ಲಿರುವಾಗ ಸಾರಸ್ವತ ಲೋಕದಲ್ಲಿರುವ ಜನರು ಸೂಕ್ಷ್ಮತೆ ಹಾಗೂ ಸಂವೇದನಾಶೀಲತೆಯನ್ನು ಕಳೆದುಕೊಳ್ಳಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಆಡು ಭಾಷೆಯಾಗಿ ಮಾತ್ರ ಉಳಿದಿದೆ. ಆದರೆ, ಓದುವ ಹಾಗೂ ಬರೆಯುವ ಭಾಷೆಯಾಗಿ ಕ್ಷೀಣಿಸುತ್ತಿದೆ. ಕನ್ನಡ ಭಾಷೆಯು ಒಂದು ಸೌಂದರ್ಯದ ಭಾಷೆಯಾಗಿ ಹಾಗೂ ಘನತೆಯ ಭಾಷೆಯಾಗಿ ಉಳಿಯಬೇಕಾದರೆ, ಕನ್ನಡ ಭಾಷೆಗೆ ಡಿಜಿಟಲ್ ಸ್ವರೂಪ ಪಡೆಯಬೇಕೆಂದು ನಿರ್ದೇಶಕ ಟಿ.ಎನ್.ಸೀತಾರಾಂ ತಿಳಿಸಿದರು.
ಸಾಮರಸ್ಯಕ್ಕೆ ಆದ್ಯತೆ: ಸಮ್ಮೇಳನದಲ್ಲಿ ಭಾಷಾ ಹಾಗೂ ಕೋಮು ಸಾಮರಸ್ಯಕ್ಕೆ ಆದ್ಯತೆ ದೊರೆಯಬೇಕೆಂದು ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಸಲಹೆ ನೀಡಿದರು. ಅಂತೆಯೇ, ಕನ್ನಡಕ್ಕೆ ಹೊಸ ತಂತ್ರಾಂಶ (ಸಾಫ್ಟ್‌ವೇರ್) ರೂಪಿಸಬೇಕೆಂದು ಭಾನು ಮುಷ್ತಾಕ್ ಅಭಿಪ್ರಾಯಪಟ್ಟರು.
ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ, ವಿಶ್ವ ವಿಜ್ಞಾನಿಯಾಗಿ ಭಾರತರತ್ನ ಗೌರವಕ್ಕೆ ಪಾತ್ರರಾಗಿರುವ ಡಾ.ಸಿ.ಎನ್.ಆರ್.ರಾವ್ ಅವರನ್ನು ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟಕರಾಗಿ ಪರಿಗಣಿಸಲು ಆಲೋಚಿಸಬೇಕೆಂದು ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಸೂಚಿಸಿದರು.
ಸಂಶೋಧಕ ಡಾ.ಚಿದಾನಂದಮೂರ್ತಿ, ಹಂಪಿ ಕನ್ನಡ ವಿವಿ ಕುಲಪತಿ ಡಾ.ಮಲ್ಲಿಕಾ ಘಂಟಿ, ಸಾಹಿತಿಗಳಾದ ಪ್ರೊ.ಕಮಲಾ ಹಂಪನಾ, ಭಾನುಮುಷ್ತಾಕ್, ಡಾ.ಸರಜೂ ಕಾಟ್ಕರ್, ಡಾ. ಬಸವರಾಜ ಸಬರದ, ಶಿವಮೊಗ್ಗ ಸುಬ್ಬಣ್ಣ, ದು.ಸರಸ್ವತಿ, ಕುಂ. ವೀರಭದ್ರಪ್ಪ, ಸಚಿವರು, ಹಿರಿಯ ಸಾಹಿತಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.







