ಮಣ್ಣಿನ ಕ್ರೀಡೆಗೆ ಆರೋಗ್ಯದ ವೈಜ್ಞಾನಿಕ ಹಿನ್ನಲೆಯಿದೆ-ನಾರಾಯಣ ರೈ ಕುದ್ಕಾಡಿ
ಪಟ್ಟೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ

ಪುತ್ತೂರು, ಜು. 18: ಸಾಂಪ್ರದಾಯಿಕ ಮಣ್ಣಿನ ಮಕ್ಕಳ ಕ್ರೀಡೆಗಳು ಆರೋಗ್ಯ ವೃದ್ಧಿಸುವ ವೈಜ್ಞಾನಿಕವಾದ ಹಿನ್ನೆಲೆಯನ್ನು ಹೊಂದಿವೆ. ಯುವ ಸಂಘಟನೆಗಳು ಸಮಾಜವನ್ನು ಜಾಗೃತಗೊಳಿಸುವ ಇಂತಹ ಕ್ರೀಡೆಗಳನ್ನು ಸಂಘಟಿಸುವುದು ಶ್ಲಾಘನೀಯ ಎಂದು ಪಡುಮಲೆ ಕೋಟಿ ಚೆನ್ನಯ ಸಂವರ್ಧನ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ರೈ ಕುದ್ಕಾಡಿ ಹೇಳಿದರು.
ಅವರು ಮಂಗಳವಾರ ಶ್ರೀಕೃಷ್ಣ ಯುವಕಮಂಡಲ ಪಟ್ಟೆ ಇದರ ಆಶ್ರಯದಲ್ಲಿ ನೆಹರೂ ಯುವಕೇಂದ್ರ ಮಂಗಳೂರು, ಯುವಜನ ಒಕ್ಕೂಟ ಪುತ್ತೂರು ಸಹಯೋಗದೊಂದಿಗೆ ಪಟ್ಟೆ ಕೆಸರುಗದ್ದೆಯಲ್ಲಿ ಆಯೋಜಿಸಲಾದ ದ್ವಿತೀಯ ವರ್ಷದ ಮುಕ್ತ ಕೆಸರುಗದ್ದೆ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಂ. ಮಾಮಚ್ಚನ್ ಮಾತನಾಡಿ ಯುವಜನತೆ ಕ್ರಿಯಾಶೀಲತೆಯಿಂದ ಇದ್ದಾಗ ಮಾತ್ರ ಗ್ರಾಮಗಳ ಅಭ್ಯುದಯ ಸಾಧ್ಯ. ಸಂಘಟಿತ ಪ್ರಯತ್ನದಿಂದ ಸಮಾಜದ ಸ್ವಾಸ್ಥ್ಯ ಹೆಚ್ಚಿಸಬಹುದು. ಇಂತಹ ಕಾರ್ಯದಲ್ಲಿ ಶ್ರೀಕೃಷ್ಣ ಯುವಕಮಂಡಲ ತೊಡಗಿಸಿಕೊಂಡಿರುವುದು ಉತ್ತಮ ಕಾರ್ಯ ಎಂದರು.
ಇಲಾಖೆಯ ಕಡೆಯಿಂದ ಲಭಿಸುವ ಸೌಲಭ್ಯಗಳನ್ನು ಯುವಕಮಂಡಲಗಳಿಗೆ ತಲುಪಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಹೇಳಿದರು. ನಿವೃತ್ತ ಮುಖ್ಯಗುರು ವೈ.ಕೆ. ನಾಯ್ಕಾ ಮಾತನಾಡಿ, ಮಣ್ಣಿನ ಕೆಲಸದಲ್ಲಿ ನಿರಂತರ ತೊಡಗಿಸಿಕೊಂಡಿದ್ದ ಹಿರಿಯರು ಈ ಕಾರಣದಿಂದಲೇ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಿದ್ದರು.
ಸಾಂಪ್ರದಾಯಿಕವಾಗಿ ಬಂದಿರುವ ಆಚರಣೆಗಳಲ್ಲಿ ಅದರದ್ದೇ ಆದ ಹಿನ್ನೆಲೆ, ಸಂಸ್ಕೃತಿ ಇರುವುದರಿಂದ ಅದನ್ನು ಮುಂದುವರೆಸುವ ಕೆಲಸ ಆಗಬೇಕು ಎಂದರು. ಪಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಾರಾಯಣ ಭಟ್ ಬೀರ್ನೋಡಿ ಅಧ್ಯಕ್ಷತೆ ವಹಿಸಿದ್ದರು. ನೆಹರೂ ಯುವ ಕೇಂದ್ರದ ಪುತ್ತೂರು ತಾಲೂಕು ಸಂಯೋಜಕಿ ಗುರುಪ್ರಿಯಾ ನಾಯಕ್, ಪಟ್ಟೆ ಶ್ರೀಕೃಷ್ಣ ಹಿ.ಪ್ರಾ. ಶಾಲೆಯ ಮುಖ್ಯಶಿಕ್ಷಕಿ ಶಂಕರಿ, ಪಟ್ಟೆ ಶ್ರೀಕೃಷ್ಣ ಪ.ಪೂ. ಕಾಲೇಜಿನ ಸಂಚಾಲಕ ಶಿರೀಷ್ ಪಿ.ಬಿ. ಶುಭಹಾರೈಸಿದರು. ನರಿಮೊಗರು ಷಣ್ಮುಖ ಯುವತಿ ಮಂಡಲದ ಕಾರ್ಯದರ್ಶಿ ವಿನಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಕೃಷ್ಣ ಯುವಕಮಂಡಲದ ಕಾರ್ಯದರ್ಶಿ ರಾಜೇಶ್ ಸ್ವಾಗತಿಸಿದರು. ಅಧ್ಯಕ್ಷ ಶಶಿಧರ್ ಪಟ್ಟೆ ವಂದಿಸಿದರು. ಸ್ಥಾಪಕಾಧ್ಯಕ್ಷ ಕೇಶವ ಪ್ರಸಾದ್ ನೀಲಗಿರಿ ಹಾಗೂ ಮಾಜಿ ಅಧ್ಯಕ್ಷ ಬಾಲಚಂದ್ರ ಪಟ್ಟೆ ಕಾರ್ಯಕ್ರಮ ನಿರ್ವಹಿಸಿದರು.
ಕ್ರೀಡಾಕೂಟದಲ್ಲಿ ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳ ವಿಭಾಗಗಳಲ್ಲಿ ಕೆಸರಿನಲ್ಲಿ ಓಟ, ಹಗ್ಗಜಗ್ಗಾಟ, ವಾಲಿಬಾಲ್, ಕೆಸರಿನ ಓಟ, ನಿಧಿ ಶೋಧನೆ, ಮಡಕೆ ಒಡೆಯುವುದು ಮತ್ತಿತರ ಕ್ರೀಡಾಕೂಟಗಳು ನಡೆಯಿತು.







