ವರ್ಷಾಂತ್ಯಕ್ಕೆ ದಾವಣಗೆರೆಯಲ್ಲಿ ಮೂರನೆ ವಿಶ್ವ ಕನ್ನಡ ಸಮ್ಮೇಳನ

ಬೆಂಗಳೂರು, ಜು. 18: ವರ್ಷಾಂತ್ಯದೊಳಗೆ ದಾವಣಗೆರೆಯಲ್ಲಿ ಮೂರನೆ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ನಾಡಿನ ಹಿರಿಯ ಸಾಹಿತಿಗಳು ಹಾಗೂ ಕಲಾವಿದರ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ.
ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ, ರಾಜ್ಯದಲ್ಲಿನ ಬರ ಸ್ಥಿತಿಗೂ, ವಿಶ್ವ ಕನ್ನಡ ಸಮ್ಮೇಳನ ಆಯೋಜನೆಗೂ ಸಂಬಂಧ ಕಲ್ಪಿಸಬಾರದು. ಅಲ್ಲದೆ, ನವೆಂಬರ್‌ನಲ್ಲೆ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಬೇಕೆಂಬ ಒತ್ತಾಯವೂ ಕೇಳಿಬಂದಿದೆ.
ಡಿಸೆಂಬರ್‌ನಲ್ಲೆ ಸಮ್ಮೇಳನ: ಡಿಸೆಂಬರ್ ಮೊದಲನೆ ಅಥವಾ ಎರಡನೆ ವಾರದಲ್ಲಿ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ಘೋಷಣೆ ಮಾಡಿದರು.
ಸಮ್ಮೇಳನವನ್ನು ಆಯೋಜಿಸುವ ಮುನ್ನ, ಸಾಂಸ್ಕೃತಿಕ ನೀತಿ ಜಾರಿಗೊಳಿಸಬೇಕು. ವಿವಿಧ ಅಕಾಡೆಮಿಗಳಲ್ಲಿ ಖಾಲಿ ಇರುವ ಅಧ್ಯಕ್ಷ-ಸದಸ್ಯರ ಸ್ಥಾನಗಳನ್ನು ಭರ್ತಿ ಮಾಡಬೇಕೆಂಬ ಸಲಹೆಗೆ ಸ್ಪಂದಿಸಿದ ಸಿದ್ದರಾಮಯ್ಯ, ಇನ್ನು ವಾರದೊಳಗೆ ಸಾಂಸ್ಕೃತಿಕ ನೀತಿಯನ್ನು ಜಾರಿಗೊಳಿಸಲಾಗುವುದು. ಅಲ್ಲದೆ, ಅಕಾಡೆಮಿಗಳಲ್ಲಿ ಖಾಲಿ ಇರುವ ಅಧ್ಯಕ್ಷ-ಸದಸ್ಯರ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದರು.
ಈ ವರ್ಷ ಜುಲೈನ ಅರ್ಧ ಭಾಗ ಕಳೆದರೂ ವರುಣ ಕೃಪೆ ತೋರಿಲ್ಲ. ಕಾವೇರಿ ಜಲಾನಯನ ಪ್ರದೇಶದ 4ಜಲಾಶಯಗಳಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ 84 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ, ಈ ಬಾರಿ ಅರ್ಧಕ್ಕಿಂತಲೂ ಕಡಿಮೆ ಅಂದರೆ ಕೇವಲ 40ಟಿಎಂಸಿಯಷ್ಟು ನೀರು ಸಂಗ್ರಹಣೆ ಇದೆ. ಪರಿಸ್ಥಿತಿಯ ವಸ್ತುಸ್ಥಿತಿಯನ್ನು ಅವಲೋಕಿಸುತ್ತಿರುವ ರಾಜ್ಯ ಸರಕಾರ ಸಧ್ಯದಲ್ಲೇ ಬರ ಪೀಡಿತ ಪ್ರದೇಶಗಳ ಹೆಸರು-ವಿವರಗಳನ್ನು ಘೋಷಿಸಲಿದೆ ಎಂದು ಹೇಳಿದರು.
ಸಂಭ್ರಮ ಇಲ್ಲದಿದ್ದರೂ, ಕನ್ನಡದ ಕಂಪು ಖಚಿತ..!
ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ರಾಜ್ಯದಲ್ಲಿ ವಾಡಿಕೆ ಮಳೆಗಿಂತಲೂ ಶೇ.24ರಷ್ಟು ಮಳೆ ಕೊರತೆ ಉಂಟಾಗಿದೆ. ರಾಜ್ಯದಲ್ಲಿ ಈ ವೇಳೆಗಾಗಲೇ 73ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು. ಆದರೆ, ಇದೀಗ 28ಲಕ್ಷ ಹೆಕ್ಟೇರ್ ಪ್ರದೇಶಲ್ಲಿ ಮಾತ್ರ ಬಿತ್ತನೆಯಾಗಿದೆ. ಇಂತಹ ಸನ್ನಿವೇಶದಲ್ಲಿ ವಿಶ್ವ ಕ್ನನಡ ಸಮ್ಮೇಳನದಲ್ಲಿ ಸಂಭ್ರಮ ಇಲ್ಲದಿದ್ದರೂ, ಕನ್ನಡದ ಕಂಪನ್ನು ಹೊರಸೂಸುವ ಪ್ರಾಮಾಣಿಕ ಪ್ರಯತ್ನವನ್ನು ಸರಕಾರ ಖಚಿತವಾಗಿ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.
‘ರಾಜ್ಯದೆಲ್ಲೆಡೆ ಕನ್ನಡ ಪ್ರಜ್ಞೆ ಜಾಗೃತಿಗೊಳಿಸಿ ಕನ್ನಡತನವನ್ನು ವಿಶ್ವ ಮಟ್ಟಕ್ಕೆ ಪಸರಿಸುವ ಕಾಯಕಕ್ಕೆ ಕನ್ನಡ ನಾಡಿನ ಎಲ್ಲ್ಲರೂ ಒಂದಾಗಬೇಕು-ಮುಂದಾಗಬೇಕು. ಡಿಸೆಂಬರ್‌ನಲ್ಲಿ ಮೂರನೆ ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ’







