ಡಿಜಿಪಿ ರೂಪಾ ವರ್ಗಾವಣೆ ವಿರೋಧಿಸಿ ಬಿಜೆಪಿ ಧರಣಿ

ಬೆಂಗಳೂರು, ಜು.19: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳನ್ನು ಬೆಳಕಿಗೆ ತಂದಿದ್ದ ಬಂದಿಖಾನೆ ಡಿಐಜಿ ಡಿ.ರೂಪಾ ಅವರ ವರ್ಗಾವಣೆ ವಿರೋಧಿ ಹಾಗೂ ಮಂಗಳೂರಿನಲ್ಲಿ ನಡೆದ ರಾಜಕೀಯ ಹತ್ಯೆಗಳ ತನಿಖೆಯನ್ನು ರಾಷ್ಟ್ರೀಯ ತನಿಖಾದಳದಿಂದ ನಡೆಸುವಂತೆ ಆಗ್ರಹಿಸಿ ರಾಜ್ಯ ಬಿಜೆಪಿ ಮುಖಂಡರು ಧರಣಿ ನಡೆಸಿದರು.
ಬುಧವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಬಿಜೆಪಿ ಮಹಿಳಾ ಮೋರ್ಚಾ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡು ರಾಜ್ಯ ಸರಕಾರದ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೊಲೆಗಳು ಸರ್ವೆ ಸಾಮಾನ್ಯವಾಗಿದ್ದು, ಜೈಲಿನ ಅವ್ಯವಹಾರದ ತನಿಖೆ ಪೂರ್ಣಗೊಳ್ಳುವುದಕ್ಕಿಂತ ಮುಂಚೆ ಡಿ.ರೂಪಾ ಅವರನ್ನು ವರ್ಗಾವಣೆ ಮಾಡಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಯಾವುದೇ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ರಕ್ಷಣೆ ಇಲ್ಲ ಎಂಬ ಸಂದೇಶ ಮುಖ್ಯಮಂತ್ರಿ ನೀಡಿದ್ದಾರೆ ಎಂದ ಅವರು, ಪರಪ್ಪನ ಅಗ್ರಹಾರ ಅವ್ಯವಹಾರಗಳ ಬಗ್ಗೆ ರಾಜ್ಯದ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಮಂಗಳೂರಿನಲ್ಲಿ ರಾಜಕೀಯ ಹತ್ಯೆಗಳು ನಡೆದಿವೆ. ಶರತ್ ಮಡಿವಾಳ ಹತ್ಯೆ ಪ್ರಕರಣ ನಡೆದಿದೆ. ಇದುವರೆಗೂ ಹತ್ಯೆಯ ಸತ್ಯಾಂಶಗಳು ಹೊರಬಂದಿಲ್ಲ. ಜೊತೆಗೆ ಆರೋಪಿಗಳ ಬಂಧನವಾಗಿಲ್ಲ. ಈ ಬಗ್ಗೆ ಮಂಗಳವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಜೊತೆ ಮಾತನಾಡಿ ಮಂಗಳೂರಲ್ಲಿ ರಾಷ್ಟ್ರೀಯ ತನಿಖಾ ದಳದ(ಎನ್‌ಐಎ) ಕಚೇರಿ ಸ್ಥಾಪಿಸಿ ಎಂದು ಮನವಿ ಸಲ್ಲಿಸಿರುವುದಾಗಿ ಯಡಿಯೂರಪ್ಪ ನುಡಿದರು.
ಪರಪ್ಪನ ಅಗ್ರಹಾರ ಗೆಸ್ಟ್ ಹೌಸ್: ನೀರಿಗಾಗಿ ನಾವು ತಮಿಳುನಾಡಿನ ಜೊತೆ ನ್ಯಾಯಾಂಗ ಹೋರಾಟ ಮಾಡುತ್ತಿದ್ದರೆ, ಅದೇ ರಾಜ್ಯದ ಶಶಿಕಲಾ ಅವರಿಗೆ ರಾಜ ಮರ್ಯಾದೆ ನೀಡಲಾಗುತ್ತಿದೆ. ಇದು ಪರಪ್ಪನ ಅಗ್ರಹಾರ ಅಲ್ಲ. ತಮಿಳುನಾಡಿನ ಗೆಸ್ಟ್ ಹೌಸ್ ಆಗಿದೆ ಎಂದು ಬಿಜೆಪಿ ಶಾಸಕ ಆರ್.ಅಶೋಕ್ ವ್ಯಂಗ್ಯವಾಡಿದರು.
ಪ್ರತಿಭಟನೆಯಲ್ಲಿ ಶಾಸಕರಾದ ಮುನಿರಾಜು, ವಿಜಯ್‌ಕುಮಾರ್, ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಶೆಟ್ಟಿ, ಶಿಲ್ಪಾ ಗಣೇಶ್, ನಟಿ ಶೃತಿ ಸೇರಿ ಪ್ರಮುಖರು ಹಾಜರಿದ್ದರು.
ಅವಾಚ್ಯ ಶಬ್ದ ನಿಲ್ಲಿಸಿದ ಬಿಜೆಪಿ ನಾಯಕರು?
ಪ್ರತಿಭಟನೆಯಲ್ಲಿ ಭಾಷಣ ಮಾಡುವಾಗ ಬಿಜೆಪಿ ನಾಯಕರು ಎಚ್ಚೆತ್ತುಕೊಂಡಿದ್ದಾರೆ. ಪ್ರತಿಭಟನೆಯಲ್ಲಿ ಯಾರೂ ಸಹ ಸರಕಾರದ ವಿರುದ್ಧ ಅವಾಚ್ಯ ಪದ ಬಳಸಲಿಲ್ಲ. ಅಲ್ಲದೆ, ಈ ಹಿಂದೆ, ಮಂಗಳೂರು ಗಲಭೆ ವಿರೋಧಿಸಿ ಪ್ರತಿಭಟನೆ ನಡೆಸಿದ ವೇಳೆ ಬಿಜೆಪಿ ನಾಯಕರ ಅವಾಚ್ಯ ಪದ ಬಳಕೆ ಬಗ್ಗೆ ಭಾರಿ ಚರ್ಚೆಯಾಗಿತ್ತು..
ಅದೇ ರೀತಿ, ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರೂ, ಧ್ವನಿವರ್ಧಕ ಹಿಡಿದು ಮಾತನಾಡಲು ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ವಿಜಯಕುಮಾರ್ ಮುಂದಾಗಲಿಲ್ಲ. ಇವರು ಈ ಹಿಂದೆ ರಾಜ್ಯ ಸರಕಾರದ ವಿರುದ್ಧ ಅವಾಚ್ಯ ಶಬ್ದ ಬಳಸಿ ಮಾತನಾಡಿದ್ದರು ಎನ್ನಲಾಗಿದೆ.







