ಅಸ್ಪ್ರಶ್ಯತೆ, ಜಾತೀಯತೆಗೆ ನಮ್ಮಲ್ಲಿ ಸ್ಥಾನವಿಲ್ಲವೆಂಬುದನ್ನು ಪ್ರಮಾಣಿಕರಿಸಬೇಕು: ಸಿ.ಟಿ.ರವಿ

ಮೂಡಿಗೆರೆ, ಜು.19: ಸಾಮಾಜಿಕ ಬದಲಾವಣೆಯೆ ಸಂಕಲ್ಪವೇ ನಮ್ಮ ಮುಖ್ಯ ಬುನಾಧಿಯಾಗಿದ್ದು, ಅಸ್ಪ್ರಶ್ಯತೆ ಜಾತಿಯತೆಗೆ ನಮ್ಮ ಮನೆ ಮನದಲ್ಲಿ ಸ್ಥಾನವಿಲ್ಲ ಎಂಬುದನ್ನು ಬಿಜೆಪಿ ಕಾರ್ಯಕರ್ತರು ಪ್ರಮಾಣಿಕರಿಸಬೇಕೆಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ತಿಳಿಸಿದರು.
ಅವರು ಬುಧವಾರ ತಾಲೂಕಿನ ಹಳೆಕೆರೆ ಬೂತ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ದೇಶಕ್ಕೆ ಶಕ್ತಿ ತುಂಬಿ ಭಾರತವನ್ನು ಜಗತ್ತಿನಲ್ಲಿ ವಿಶ್ವಗುರುವನ್ನಾಗಿ ಕಾಣಬೇಕೆಂದರೆ ನಮ್ಮ ಸಮಾಜದಲ್ಲಿರುವ ಜಾತೀಯತೆ ಮತ್ತು ಅಸ್ಪ್ರಶ್ಯತೆಯನ್ನು ತೊಡೆದು ಹಾಕಬೇಕು. ದೇಶ ಮೊದಲು. ಆನಂತರ ರಾಜಕೀಯ. ದೇಶಕ್ಕಾಗಿ ರಾಜಕೀಯವನ್ನೂ ತೊರೆಯಲು ಸಿದ್ದ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಮೋದಿ ದೇಶ ಅಭಿವೃದ್ಧಿಯಾಗಬೇಕಾದಲ್ಲಿ ಬಡವರು ಮತ್ತು ದಲಿತರನ್ನು ಮುಖ್ಯವಾಹಿನಿಗೆ ತರಲೇಬೇಕು ಎಂಬ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ದೇಶಾಭಿವೃದ್ಧಿಗಾಗಿ ವರ್ಷದಲ್ಲಿ ಎರಡು ಒಳ್ಳೆಯ ಕೆಲಸವನ್ನಾದರೂ ಮಾಡಬೇಕು. ಜಲ, ಪರಿಸರ ಸಂರಕ್ಷಣೆ, ಶಾಲೆ, ದೇವಾಲಯ ಇವುಗಳ ರಕ್ಷಣೆ ಮಾಡಬೇಕು. ದಿನನಿತ್ಯ ಬಳಸುವ ಆಹಾರವನ್ನು ಜನರು ದುರ್ಭಳಕೆ ಮಾಡಿಕೊಳ್ಳುತ್ತಿರುವುದರಿಂದ 2.ಕೋಟಿ ಜನರು ಹೊಟ್ಟೆ ತುಂಬಿಸಿಕೊಳ್ಳುವಷ್ಟು ಆಹಾರ ನಷ್ಟವಾಗುತ್ತಿದೆ ಎಂದು ಹೇಳಿದರು.
ಬೂತ್ ವಿಸ್ತಾರಕರು ಕಾರ್ಯ ಮಹತ್ವದಾಗಿದ್ದು, ಕಾಶ್ಮೀರಕ್ಕೆ ನೆಹರು ಅವರು ಸ್ವಾಯತ್ತತೆ ನೀಡುವ ನಿರ್ಧಾರವನ್ನು ಖಂಡಿಸಿ ಹೊರ ಬಂದ ದೀನ್ ದಯಾಳು ಉಪಾಧ್ಯಯರು ಸೇರಿದಂತೆ 10 ಜನರಿಂದ ಪ್ರಾರಂಭವಾದ ಬಿಜೆಪಿ ಇದೀಗ 17 ರಾಜ್ಯಗಳು ಸೇರಿದಂತೆ ಕೇದ್ರದಲ್ಲಿ ಅಧಿಕಾರದಲ್ಲಿದೆ. 14 ಕೋಟಿ ಸದಸ್ಯ ಕಾರ್ಯಕರ್ತರನ್ನು ಹೊಂದಿರುವ ವಿಶ್ವದ ಏಕೈಕ ದೊಡ್ಡ ಪಕ್ಷವೆಂದು ಹೆಸರು ಪಡೆದಿದೆ. ಬೂತ್‌ನಲ್ಲಿ ಕಾರ್ಯ ನಿರ್ವಹಿಸುವವರು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ನಿವೇಶನ ರಹಿತರು ಮತ್ತು ವಸತಿ ರಹಿತರ ಪಟ್ಟಿ ಮಾಡಬೇಕು. ಗ್ರಾಮೀಣ ಕ್ರೀಡೆಗಳನ್ನು ಸಂಯೋಜಿಸಬೇಕು. ಈ ನಿಟ್ಟಿನಲ್ಲಿ ಸಮುದಾಯಗಳನ್ನು ಜಾಗೃತಗೊಳಿಸಬೇಕು ಎಂದು ನುಡಿದರು.
ಇದೇ ವೇಳೆ ಹಳೆಕೆರೆ ಶಾಲಾ ಆವರಣದಲ್ಲಿ ಗಿಡವನ್ನು ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿದರು.







