ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ

ಶಿವಮೊಗ್ಗ, ಜು. 19: ಜಿಲ್ಲೆಯ ಪತ್ರಕರ್ತರ ಪ್ರತಿಭೆ ಮತ್ತು ವೃತ್ತಿ ಕೌಶಲ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘವು ಕೊಡ ಮಾಡುತ್ತಿರುವ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎನ್.ರವಿಕುಮಾರ್ ಅವರು 2017 ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆಗೊಳಿಸಿದರು.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಅತ್ಯಂತ ರಚನಾತ್ಮಕವಾಗಿ, ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ. ಯುವ ಉತ್ಸಾಹಿ ಪತ್ರಕರ್ತರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಂಘಟಿಸಿದೆ. ಮುಖ್ಯವಾಗಿ ಹಿರಿಯ ತಲೆಮಾರಿನ ಪತ್ರಕರ್ತರನ್ನು ಇಂದಿನ ತಲೆಮಾರಿಗೆ ಪರಿಚಯಿಸುವ ದೃಷ್ಟಿಯಿಂದ ಅಗಲಿದ ಹಿರಿಯ ಚೇತನಗಳ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡುತ್ತಿದೆ. ಈ ವರ್ಷವೂ ಸಹ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ ಎಂದರು.
ಈ ಬಾರಿ ಜೀವಮಾನ ಸಾಧನೆಗಾಗಿ ’ಮಿಂಚು ಶ್ರೀ ನಿವಾಸ್ ಪ್ರಶಸ್ತಿ’ಯನ್ನು ಶಿವಮೊಗ್ಗದ ಹಿರಿಯ ಪತ್ರಕರ್ತ ಬಂಡಿಗಡಿ ಜಿ. ನಂಜುಂಡಪ್ಪ ಹಾಗೂ ತೀರ್ಥಹಳ್ಳಿಯ ಟಿ.ಕೆ.ರಮೇಶ್ ಶೆಟ್ಟಿರವರಿಗೆ ಪ್ರದಾನ ಮಾಡಲಾಗುತ್ತಿದೆ. ಅತ್ಯುತ್ತಮ ರಾಜಕೀಯ ವಿಶ್ಲೇಷಣಾ ವರದಿಗೆ ಎಂ.ನಾಗೇಂದ್ರರಾವ್ ಪ್ರಶಸ್ತಿಯನ್ನು ಹಿರಿಯ ವರದಿಗಾರ ಬಿ.ರೇಣುಕೇಶ್‌ರವರಿಗೆ, ಅತ್ಯುತ್ತಮ ಸಾಂಸ್ಕೃತಿಕ ವರದಿಗೆ ಹೆಚ್.ಎಸ್.ರಂಗಸ್ವಾಮಿ ಪ್ರಶಸ್ತಿಗೆ ವರದಿಗಾರ ಗಜೇಂದ್ರ ಕುಡಾಲ್ಕರ್‌ರವರಿಗೆ, ಅತ್ಯುತ್ತಮ ಮಾನವೀಯ ವರದಿಗೆ ’ಶ್ರೀಮತಿ ಗಂಗಮ್ಮ ನಾಗಯ್ಯ ಪ್ರಶಸ್ತಿ’ ಶಿಕಾರಿಪುರದ ನರಸಿಂಹ ಸ್ವಾಮಿಯವರಿಗೆ, ಅತ್ಯುತ್ತಮ ಛಾಯಾಚಿತ್ರಕ್ಕಾಗಿ ಪ್ರಮೋದ್ ಮೆಳ್ಳಿಘಟ್ಟಿ ಪ್ರಶಸ್ತಿಯನ್ನು ಛಾಯಾಗ್ರಾಹಕ ಶಿವಮೊಗ್ಗ ನಂದನ್‌ರವರಿಗೆ, ಅತ್ಯುತ್ತಮ ತನಿಖಾವರದಿಗೆ ನಂಜುಂಡ ಶಾಸ್ತ್ರಿ ಪ್ರಶಸ್ತಿಯನ್ನು ಸಾಗರದ ವರದಿಗಾರ ಜಿ. ನಾಗೇಶ್‌ರವರಿಗೆ, ಅತ್ಯುತ್ತಮ ದೃಶ್ಯ ಮಾಧ್ಯಮ ವರದಿಗೆ ಪೇ. ದೇವಣ್ಣ ಮತ್ತು ಛಲಗಾರ ಗಣಪತಿ ಪ್ರಶಸ್ತಿಯನ್ನು ವರದಿಗಾರರಾದ ಬಸವರಾಜ್ ಹಾಗೂ ಛಾಯಾಗ್ರಾಹಕ ಪುಟ್ಟಪ್ಪರವರಿಗೆ, ಅತ್ಯುತ್ತಮ ಸಾಹಿತ್ಯಿಕ ವರದಿಗೆ ಡಾ. ವಿಶ್ವನಾಥ್ ರಾವ್(ನಾಗಾನಂದ) ಪ್ರಶಸ್ತಿಯನ್ನು ಪತ್ರಕರ್ತ ಶಶಿ ಸಂಪಳ್ಳಿರವರಿಗೆ, ಅತ್ಯುತ್ತಮ ಪರಿಸರ ವರದಿಗೆ ಜಾಗೃತಿ ಶ್ರೀನಿವಾಸ್ ಅಯ್ಯಂಗಾರ್ ವರದಿಗಾರರಾದ ವಿ.ಟಿ.ಅರುಣ್‌ರವರಿಗೆ ಹಾಗೂ ಅತ್ಯುತ್ತಮ ಕ್ರೀಡಾ ವರದಿಗೆ ಎಸ್.ವಿ.ಮಂಜುನಾಥ್ ಪ್ರಶಸ್ತಿಯನ್ನು ವರದಿಗಾರ ಅನಿಲ್ ಸಾಗರ್‌ರವರಿಗೆ ನೀಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗೆ ಭಾಜನರಾಗಿರುವ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಛಾಯಾಗ್ರಾಹಕ ಎಂ. ನಿಂಗನ ಗೌಡ ಹಾಗೂ ಸ್ವಿಝರ್ ಲ್ಯಾಂಡ್‌ನಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗಿಯಾದ ಡೆಕನ್ ಹೆರಾಲ್ಡ್ ಪತ್ರಿಕೆಯ ವರದಿಗಾರ ನೃಪತುಂಗರವರನ್ನು ವಿಶೇಷವಾಗಿ ಗೌರವಿಸಲಾಗುತ್ತಿದೆ ಎಂದರು.
ಪ್ರಶಸ್ತಿ ಹಾಗೂ ಬಹುಮಾನಗಳನ್ನು ಜು. 23ರ ಭಾನುವಾರದಂದು ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ನಡೆಯಲಿರುವ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಮನ್ವಯಕಾರ ಕೆ. ವಿ. ಪ್ರಭಾಕರ್ ಪ್ರದಾನ ಮಾಡಲಿದ್ದಾರೆ. ಹಿರಿಯ ಪತ್ರಕರ್ತ ಈಶ್ವರ ದೈತೋಟ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ವಿಪಕ್ಷ ನಾಯಕ ಕೆ. ಎಸ್. ಈಶ್ವರಪ್ಪ, ಶಾಸಕ ಕೆ. ಬಿ. ಪ್ರಸನ್ನಕುಮಾರ್, ವಿಧಾನ ಪರಿಷತ್ ಸದಸ್ಯರಾದ ಆರ್. ಪ್ರಸನ್ನ ಕುಮಾರ್, ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಾಪೌರರಾದ ಏಳುಮಲೈ, ಜಿಲ್ಲಾಧಿಕಾರಿಗಳಾದ ಡಾ. ಎಂ. ಲೋಕೇಶ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರಾಕೇಶ್ ಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎಸ್. ರುದ್ರೇಗೌಡ, ಜಾತ್ಯಾತೀತ ಜನತಾ ದಳದ ನಿಕಟ ಪೂರ್ವ ಅಧ್ಯಕ್ಷ ಎಸ್. ಶ್ರೀಕಾಂತ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎನ್. ರಾಜು, ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಸಂಘಗಳ ಮಹಾ ಮಂಡಳಲ ಪ್ರಧಾನ ಕಾರ್ಯದರ್ಶಿ ಮದನ ಗೌಡ, ಉಪಾಧ್ಯಕ್ಷರಾದ ಶಿವಾನಂದ ತಗಡೂರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್. ಷಡಾಕ್ಷರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ಗಾಯಕಿ ಶ್ರಿಮತಿ ನಾಗರತ್ನ ಮತ್ತು ತಂಡದಿಂದ ರಂಗಗೀತೆಗಳು ಹಾಗೂ ವಚನ ಗಾಯನ ನಡೆಯಲಿದೆ ಎಂದ ಅವರು, ಜಿಲ್ಲೆಯ ಎಲ್ಲಾ ಪತ್ರಕರ್ತರು, ವಿದ್ಯುನ್ಮಾನ ಮಾಧ್ಯಮದ ವರದಿಗಾರರು, ಛಾಯಾಗ್ರಾಹಕರು ಅವರ ಕುಟುಂಬ ವರ್ಗದವರು, ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಸೇವಾ ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು. ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ನಿಂಗನಗೌಡ, ಉಪಾಧ್ಯಕ್ಷರಾದ ರವಿ ಬಿದನೂರು, ರಾಷ್ಟ್ರಿಯ ಮಂಡಳಿ ಸದಸ್ಯ ಕೆ.ವಿ ಶಿವಕುಮಾರ್, ಸಾಂಸ್ಕೃತಿ ವೇದಿಕೆ ಸಂಚಾಲಕ ಜಗದೀಶ್ ಸಂಪಳ್ಳಿ ಉಪಸ್ಥಿತರಿದ್ದರು.







