ತೀವ್ರಗೊಳ್ಳುತ್ತಿರುವ ಡೋಕ್ಲಾಮ್ ಬಿಕ್ಕಟ್ಟು
ಟಿಬೆಟ್‌ಗೆ ಸೇನಾ ಉಪಕರಣಗಳು, ವಾಹನಗಳನ್ನು ರವಾನಿಸಿದ ಚೀನಾ

ಹೊಸದಿಲ್ಲಿ,ಜು.19: ಭಾರತದೊಂದಿಗೆ ಡೋಕ್ಲಾಮ್ ಗಡಿ ಬಿಕ್ಕಟ್ಟು ಆರಂಭಗೊಂಡಾ ಗಿನಿಂದ ಚೀನಾ ಸಾವಿರಾರು ಟನ್ ತೂಕದ ಮಿಲಿಟರಿ ಉಪಕರಣಗಳು ಮತ್ತು ವಾಹನ ಗಳನ್ನು ಟಿಬೆಟ್‌ಗೆ ಸಾಗಿಸಿದೆ ಎಂದು ಚೀನಿ ಸರ್ಕಾರಿ ಮಾಧ್ಯಮವೊಂದು ವರದಿ ಮಾಡಿದೆ.
ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ)ಯ ವೆಸ್ಟರ್ನ್ ಥಿಯೇಟರ್ ಕಮಾಂಡ್ (ಡಬ್ಲುಟಿಸಿ) ಉತ್ತರ ಟಿಬೆಟ್‌ನಲ್ಲಿರುವ ಕುನ್ಲೂನ್ ಪರ್ವತದ ದಕ್ಷಿಣಕ್ಕೆ ಮಿಲಿಟರಿ ಉಪಕರಣಗಳನ್ನು ಸಾಗಿಸಿದೆ ಎಂದು ವರದಿಯು ತಿಳಿಸಿದೆ.
ಝಿಂಜಿಯಾಂಗ್ ಮತ್ತು ಟಿಬೆಟ್‌ನ ಅಶಾಂತ ಪ್ರದೇಶಗಳ ಉಸ್ತುವಾರಿ ಹೊತ್ತಿರುವ ಡಬ್ಲುಟಿಸಿಯು ಭಾರತದೊಂದಿಗಿನ ಗಡಿ ವಿವಾದಗಳನ್ನು ನಿರ್ವಹಿಸುತ್ತದೆ.
ಈ ಮಿಲಿಟರಿ ಉಪಕರಣಗಳು ಮತ್ತು ವಾಹನಗಳನ್ನು ರಸ್ತೆ ಮತ್ತು ರೈಲಿನ ಮೂಲಕ ಏಕಕಾಲಕ್ಕೆ ಸಾಗಿಸಲಾಗಿದೆ ಎಂದು ‘ಪಿಎಲ್‌ಎ ಡೇಲಿ’ಯನ್ನು ಉಲ್ಲೇಖಿಸಿ ‘ಸೌಥ್ ಚೀನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ.
ಚೀನಾದ ಸಮರಾಭ್ಯಾಸಕ್ಕೆ ನೆರವಾಗಲು ಈ ಉಪಕರಣಗಳು ಮತ್ತು ವಾಹನಗಳನ್ನು ಸಾಗಿಸಲಾಗಿದೆಯೇ ಅಥವಾ ಇದಕ್ಕೆ ಬೇರೆ ಕಾರಣಗಳಿವೆಯೇ ಎನ್ನುವುದನ್ನು ವರದಿಯು ತಿಳಿಸಿಲ್ಲ. ಚೀನಿ ಸೇನೆಯು ಟಿಬೆಟ್‌ನಲ್ಲಿ ಸಮರಾಭ್ಯಾಸ ನಡೆಸಿರುವುದು ಸೋಮವಾರ ವರದಿಯಾಗಿತ್ತು.
ನೈಋತ್ಯ ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಪಿಎಲ್‌ಎ ಸಮರಾಭ್ಯಾಸ ಕೈಗೊಂಡಿದೆ ಎಂದು ಸರಕಾರಿ ಸ್ವಾಮ್ಯದ ಚೀನಾ ಸೆಂಟ್ರಲ್ ಟಿವಿ ಶುಕ್ರವಾರ ತಿಳಿಸಿತ್ತು. ಆದರೆ ಸಮರಾಭ್ಯಾಸದ ನಿಖರವಾದ ವೇಳೆಯನ್ನು ಅದು ಉಲ್ಲೇಖಿಸಿರಲಿಲ್ಲ.
ಪಿಎಲ್‌ಎದ ಟಿಬೆಟ್ ಮಿಲಿಟರಿ ಕಮಾಂಡ್‌ನ ಬ್ರಿಗೇಡ್ ಈ ಸಮರಾಭ್ಯಾಸವನ್ನು ನಡೆಸಿದ್ದು,ಅದು ಚೀನಾದ ಎರಡು ಪ್ರಸ್ಥಭೂಮಿ ಪರ್ವತ ಬ್ರಿಗೇಡ್‌ಗಳಲ್ಲೊಂದಾಗಿದೆ.
ಪರ್ವತಮಯ ಟಿಬೆಟ್ ಪ್ರದೇಶವನ್ನು ಸಂಪರ್ಕಿಸುವ ಹಲವಾರು ವಿಭಾಗಗಳುದ್ದಕ್ಕೂ ಭಾರತ-ಚೀನಾ ಗಡಿಯ ವಾಸ್ತವ ನಿಯಂತ್ರಣ ರೇಖೆಯ ರಕ್ಷಣೆಯ ಹೊಣೆ ಪಿಎಲ್‌ಎ ಟಿಬೆಟ್ ಕಮಾಂಡ್‌ನದ್ದಾಗಿದೆ.
ಕಳೆದ ಜೂನ್ 16ರಂದು ಸಿಕ್ಕಿಂ ವಿಭಾಗದ ಡೋಕ್ಲಾಮ್ ಪ್ರದೇಶದಲ್ಲಿ ಚೀನಿ ಸೈನಿಕರಿಂದ ರಸ್ತೆ ನಿರ್ಮಾಣ ಕಾರ್ಯವನ್ನು ಭಾರತೀಯ ಯೋಧರು ನಿಲ್ಲಿಸಿದಾಗಿನಿಂದ ಉಭಯ ರಾಷ್ಟ್ರಗಳ ನಡುವೆ ಗಡಿ ಬಿಕ್ಕಟ್ಟು ದಿನೇದಿನೇ ತೀವ್ರಗೊಳ್ಳುತ್ತಿದೆ.
ಡೋಕಾ ಲಾ ಈ ಪ್ರದೇಶದ ಭಾರತೀಯ ಹೆಸರಾಗಿದ್ದು, ಭೂತಾನ್ ಇದನ್ನು ಡೋಕಲಾಮ್ ಎಂದು ಕರೆಯುತ್ತಿದೆ ಮತ್ತು ಚೀನಾ ಇದು ತನ್ನ ಡೋಂಗ್ಲಾಂಗ್ ಪ್ರದೇಶದ ಭಾಗವಾಗಿದೆ ಎಂದು ಹೇಳಿಕೊಳ್ಳುತ್ತಿದೆ.
ಜಮ್ಮು-ಕಾಶ್ಮೀರದಿಂದ ಅರುಣಾಚಲ ಪ್ರದೇಶವರೆಗಿನ 3,488 ಕಿ.ಮೀ.ಉದ್ದದ ಭಾರತ-ಚೀನಾ ಗಡಿಯ 220 ಕಿ.ಮೀ.ಭಾಗವು ಸಿಕ್ಕಿಮ್ ಮೂಲಕ ಹಾದುಹೋಗಿದೆ.







