ಶಿವಮೊಗ್ಗದಲ್ಲಿ ಮೃತಪಟ್ಟಿದ್ದು ಯಾರೋ, ಶೋಭಾ ಕರಂದ್ಲಾಜೆ ಕೊಟ್ಟಿದ್ದು ಇನ್ಯಾರದ್ದೋ ಹೆಸರು!
ಶೋಭಾ ಪತ್ರದ ಮುಗಿಯದ ಎಡವಟ್ಟುಗಳು

ಶಿವಮೊಗ್ಗ, ಜು. 19: ರಾಜ್ಯ ಕಾಂಗ್ರೆಸ್ ಸರ್ಕಾರದ ಕಳೆದ 4 ವರ್ಷಗಳ ಅವಧಿಯಲ್ಲಿ ರಾಜ್ಯದ ವಿವಿಧೆಡೆ ನಡೆದಿರುವ ಕೆಲ ವ್ಯಕ್ತಿಗಳ ಹತ್ಯೆ ಪ್ರಕರಣಗಳ ಕುರಿತಂತೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯೆ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ತಪ್ಪುಗಳು ಒಂದರ ಮೇಲೊಂದು ಪತ್ತೆಯಾಗುತ್ತಿವೆ.
ಶೋಭಾ ಕರಂದ್ಲಾಜೆ ಬರೆದ ಪತ್ರದಲ್ಲಿ ಕೊಲೆಗೀಡಾದವರ ಹೆಸರಿನ ಪಟ್ಟಿಯಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಯುವಕ ಅಶೋಕ್ ಪೂಜಾರಿ ಜೀವಂತವಾಗಿರುವ ಮಾಹಿತಿ ಬೆಳಕಿಗೆ ಬಂದ ಬೆನ್ನಲ್ಲೇ ಇನ್ನೊಂದು ಎಡವಟ್ಟು ಬೆಳಕಿಗೆ ಬಂದಿದೆ. ಶೋಭಾ ಹೆಸರಿಸಿರುವ ಶಿವಮೊಗ್ಗದ ವ್ಯಕ್ತಿಯ ಮಾಹಿತಿಯೂ ಕೂಡ ತಪ್ಪಿನಿಂದ ಕೂಡಿರುವುದು ಕಂಡುಬಂದಿದೆ. ತಮ್ಮ ಪತ್ರದಲ್ಲಿ ಫೆಬ್ರವರಿ 19, 2015 ರಂದು ಶಿವಮೊಗ್ಗದ ಹಿಂದೂ ಸಂಘಟನೆಯ ಕಾರ್ಯಕರ್ತ ವೆಂಕಟೇಶ್ ಎಂಬವರ ಹತ್ಯೆ ನಡೆದಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಆದರೆ ಆ ದಿನ ವೆಂಕಟೇಶ್ ಎಂಬ ಹೆಸರಿನ ಯಾವುದೇ ವ್ಯಕ್ತಿಯ ಹತ್ಯೆಯೇ ನಡೆದಿಲ್ಲ! ಅಂದು ಆಲ್ಕೋಳದ ವಿಶ್ವನಾಥ್ ಎಂಬುವರ ಕೊಲೆಯಾಗಿತ್ತು ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಖಂಡನೆ: ಕೇಂದ್ರ ಗೃಹ ಸಚಿವರಿಗೆ ಬರೆದಿರುವ ಪತ್ರದಲ್ಲಿ ಹಲವು ತಪ್ಪು ಮಾಹಿತಿ ಇರುವುದನ್ನು ಯುವ ಕಾಂಗ್ರೆಸ್ ಮುಖಂಡ ಕೆ.ರಂಗನಾಥ್ ಖಂಡಿಸಿದ್ದಾರೆ.
ಶೋಭಾ ಕರಂದ್ಲಾಜೆ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರು ತಮ್ಮ ಸ್ಥಾನದ ಘನತೆ ಅರಿತು ನಡೆದುಕೊಳ್ಳಬೇಕಾ ಗಿದೆ. ಗೃಹ ಸಚಿವರಿಗೆ ಪತ್ರ ಬರೆಯುವುದಕ್ಕೂ ಮುನ್ನ ಮೃತಪಟ್ಟವರ ಹೆಸರುಗಳನ್ನು ಸಮರ್ಪಕವಾಗಿ ಪರಿಶೀಲಿಸಬೇಕಾಗಿತ್ತು. ಆದರೆ ಮನಸೋ ಇಚ್ಛೆ ಹೆಸರುಗಳನ್ನು ನಮೂದಿಸಿ ಕಳುಹಿಸಿದ್ದಾರೆ. ಜೀವಂತವಾಗಿರುವವರು ಹತ್ಯೆಗೀಡಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದು ಅವರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕೆ.ರಂಗನಾಥ್ ಟೀಕಿಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿ ಕೋಮು ರಾಜಕಾರಣ ನಡೆಸಲು ಮುಂದಾಗುತ್ತಿದೆ. ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಗೆ ಮುಂದಾಗುತ್ತಿದೆ. ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ರಾಜ್ಯಕ್ಕೆ ಬೆಂಕಿ ಬೀಳಲಿದೆ ಎಂದು ನೀಡಿದ್ದ ಹೇಳಿಕೆಗಳೇ ಇದಕ್ಕೆ ಸಾಕ್ಷಿಯಾಗಿವೆ. ಯಾವುದೇ ಕಾರಣಕ್ಕೂ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕೆ.ರಂಗನಾಥ್ ತಿಳಿಸಿದ್ದಾರೆ.
ರೈತರ ಸಾಲ ಮನ್ನಾಕ್ಕೆ ಪ್ರಧಾನಿಗೆ ಪತ್ರ ಬರೆಯಲಿ: ಶೋಭಾ ಕರಂದ್ಲಾಜೆ ರಾಜ್ಯದ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರು ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ, ಕೇಂದ್ರ ಹಣಕಾಸು ಸಚಿವರು, ಗೃಹ ಸಚಿವರಿಗೆ ಪತ್ರ ಬರೆಯಲಿ. ಆದರೆ ಯಾವುದೊ ಪ್ರಕರಣಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದರಿಂದ ಯಾವುದೇ ಪ್ರಯೋಜನವಿಲ್ಲವಾಗಿದೆ. ಪ್ರಸ್ತುತ ಸಂಸತ್ ಅಧಿವೇಶನದಲ್ಲಿ ರಾಜ್ಯದ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ರೈತರ ಸಾಲ ಮನ್ನಾದ ಬಗ್ಗೆ ಬಿಜೆಪಿ ಸಂಸದರು ಚರ್ಚೆ ಮಾಡಬೇಕು. ಪ್ರಧಾನಿ ಮೇಲೆ ಒತ್ತಡ ಹಾಕಿ ಸಾಲ ಮನ್ನಾಕ್ಕೆ ಕ್ರಮಕೈಗೊಳ್ಳಬೇಕು ಎಂದು ಯುವ ಕಾಂಗ್ರೆಸ್ ಮುಖಂಡ ಕೆ.ರಂಗನಾಥ್ ಆಗ್ರಹಿಸಿದ್ದಾರೆ.







