ತಾಲೂಕು- ವಿಭಾಗ ಮಟ್ಟದ ಯುವಜನ ಮೇಳ ಕೈಬಿಡದಿರಲು ಆಗ್ರಹ
ಮಂಗಳೂರು, ಜು.19: ರಾಜ್ಯ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ಯುವ ಸಮ್ಮೇಳನ, ಯುವಜನೋತ್ಸವ ಹಾಗೂ ಯುವಜನ ಮೇಳವನ್ನು ಒಟ್ಟಾಗಿ ನಡೆಸಲು ನಿರ್ಧರಿಸಿರುವ ಕ್ರಮವನ್ನು ಕೈಬಿಡುವಂತೆ ದ.ಕ. ಜಿಲ್ಲಾ ಯುವಜನ ಒಕ್ಕೂಟ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಕಳೆದ ಸುಮಾರು 40 ವರ್ಷಗಳಿಂದ ಯುವಜನ ಮೇಳ ಪ್ರತಿ ತಾಲೂಕು ಮಟ್ಟದಲ್ಲಿ ನಡೆಯುತ್ತಿದ್ದು, ಅಲ್ಲಿ ವಿಜೇತರಾದವರು ಜಿಲ್ಲಾ ಮಟ್ಟ, ಬಳಿಕ ವಿಭಾಗ ಆ ಬಳಿಕ ರಾಜ್ಯ ಮಟ್ಟದ ಸ್ಪರ್ಧೆಯ ಮೂಲಕ ನಡೆಸಲಾಗುತ್ತಿತ್ತು. ಅದೇ ರೀತಿ ಯುವಜನೋತ್ಸವ ಸ್ಪರ್ಧಾ ಕಾರ್ಯಕ್ರಮ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧಾ ಕಾರ್ಯಕ್ರಮವಾಗಿ ನಡೆಸಲಾಗುತ್ತಿತ್ತು. ಯುವ ಸಮ್ಮೇಳನ ಹಾಗೂ ಯುವಜನ ಕಾರ್ಯಾಗಾರ ಎಂಬುದು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪ್ರತ್ಯೇಕವಾಗಿ ನಡೆಸಲಾಗುತ್ತಿತ್ತು. ಇದೀಗ ಕಳೆದ ಮೇ ತಿಂಗಳಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳು ಸಭೆ ನಡೆಸಿ ತಾಲೂಕು ಮತ್ತು ವಿಭಾಗ ಮಟ್ಟದ ಯುವ ಜನ ಮೇಳೆವನ್ನು ಕೈ ಬಿಟ್ಟು ನೇರವಾಗಿ ಜಿಲ್ಲೆ ಮತ್ತು ರಾಜ್ಯ ಮಟ್ಟದ ಸ್ಪರ್ಧೆ ನಡೆಸುವುದಾಗಿ ಹೇಳಿದ್ದಾರೆ. ಯುವಜನ ಮೇಳ, ಯುವಜನೋತ್ಸವ ಹಾಗೂ ಯುವಜನ ಸಮ್ಮೇಳನ ಒಟ್ಟಾಗಿ ನಡೆಸುವುದು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಂತೆ.
ಯುವಜನ ಮೇಳದಲ್ಲಿ 22, ಯುವಜನೋತ್ಸವದಲ್ಲಿ 19 ವಿಧದ ಸ್ಪರ್ಧೆಗಳಿಸುತ್ತವೆ. ಪ್ರತಿ ವಿಭಾಗಕ್ಕೂ ರಾಜ್ಯದ 31 ಜಿಲ್ಲೆಯ ತಂಡಗಳು ಭಾಗವಹಿಸುತ್ತವೆ. ಅಲ್ಲದೆ ಯುವಜನ ಕಾರ್ಯಾಗಾರ ಒಂದು ದಿನಕ್ಕೆ ಸೀಮಿತವಾಗಿರುತ್ತದೆ. ಇದನ್ನು ಈ ಸ್ಪರ್ಧಾ ಕಾರ್ಯಕ್ರಮದ ಜತೆ ಸೇರಿಸಿಕೊಂಡು ನಡೆಸುವುದು ಪ್ರಾಯೋಗಿಕವಾಗಿ ಅಸಾಧ್ಯ ಎಂದು ಅವರು ಹೇಳಿದರು.
ಈ ಬಗ್ಗೆ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವರಿಗೆ ಮನವಿ ನೀಡಲಾಗಿದ್ದರೂ ಸ್ಪಂದನೆ ದೊರಕಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಗ್ರಾಮೀಣ ಮಟ್ಟಕ್ಕೆ ಪೂರಕವಾಗಿಲ್ಲ ಕ್ರೀಡಾ ಪರಿಕರಗಳು!
ಕ್ರೀಡಾ ಮಿತ್ರ ಯೋಜನೆಯಡಿ ಇಲಾಖೆ ಮೂಲಕ ಪರಿಕರಗಳನ್ನು ಯುವಕ ಮಂಡಲಗಳಿಗೆ ವಿತರಿಸಲಾಗುತ್ತದೆ. ಕಳೆದ ಬಾರಿ ಬಂದ ಪರಿಕರಗಳನ್ನು ದ.ಕ. ಜಿಲ್ಲೆಯ ಯುವಕ ಮಂಡಲಗಳು ಹಿಂತಿರುಗಿಸಿದ್ದವು. ಬಳಿಕ ಮತ್ತೆ 24,000 ರೂ. ಮೌಲ್ಯದ ಪರಿಕರಗಳನ್ನು ವಿತರಿಸಲಾಗಿತ್ತು. ಆದರೆ ಇದರಲ್ಲಿ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಪೂರಕವಾದ ಪರಿಕರಗಳಿಲ್ಲ. ಹಾಗಾಗಿ ಇಲಾಖೆಯು ಯುವಕ ಮಂಡಳಗಳಿಗೆ ಈ ಹಿಂದಿನ ರೀತಿಯಲ್ಲಿ ಪರಿಕರಣ ಖರೀದಿಗೆ ವ್ಯವಸ್ಥೆ ಮಾಡಬೇಕು ಎಂದು ನರೇಶ್ ಆಗ್ರಹಿಸಿದರು.
ಗೋಷ್ಠಿಯಲ್ಲಿ ಗುರುಪ್ರಿಯಾ, ಚಂದ್ರಶೇಖರ್, ಸುಬ್ರ್ಮಣ್ಯ ಕರಂಬಾರು ಉಪಸ್ಥಿತರಿದ್ದರು.







