ಬಿಜೆಪಿ ‘ಬೀಫ್ ಜಾಯ್ ಪಾರ್ಟಿ’ ಎಂದು ಬದಲಾಯಿತೇ : ವಿಎಚ್‌ಪಿ ಪ್ರಶ್ನೆ
ಗೋಮಾಂಸ ಕುರಿತು ಪಾರಿಕ್ಕರ್ ಹೇಳಿಕೆಗೆ ಖಂಡನೆ

ಹೊಸದಿಲ್ಲಿ, ಜು.19: ಗೋಮಾಂಸ ಭಕ್ಷಣೆ ಕುರಿತು ಗೋವ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ವಿಶ್ವಹಿಂದು ಪರಿಷದ್(ವಿಎಚ್‌ಪಿ) , ಅವರ ರಾಜೀನಾಮೆಗೆ ಆಗ್ರಹಿಸಿದೆ.
ಪಾರಿಕ್ಕರ್ ಅವರು ಬಿಜೆಪಿಯ ಪ್ರತಿಷ್ಠೆಗೆ ಹಾನಿ ಎಸಗಿದ್ದಾರೆ ಎಂದು ವಿಎಚ್‌ಪಿ ಮುಖಂಡ ಡಾ ಸುರೇಂದ್ರ ಜೈನ್ ಹೇಳಿದ್ದಾರೆ.
ಬಿಜೆಪಿಯು ‘ಬೀಫ್ ಜಾಯ್ ಪಾರ್ಟಿ’ (ಗೋಮಾಂಸ ಮಜಾ ಪಕ್ಷ) ಎಂದು ಬದಲಾಯಿತೇ ಎಂದು ಪ್ರಶ್ನಿಸಿರುವ ಜೈನ್, ಬಿಜೆಪಿಯ ಮುಖ ತೊಳೆಯಬೇಕಾದರೆ ಪಾರಿಕ್ಕರ್ ರಾಜೀನಾಮೆ ನೀಡಬೇಕು .ಗೋವ ಮತ್ತು ಕರ್ನಾಟಕದಲ್ಲಿರುವ ಗೋವಧೆ ನಿಷೇಧ ನಿಯಮದ ಕುರಿತು ಪಾರಿಕ್ಕರ್‌ಗೆ ತಿಳಿದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಗೋವದಲ್ಲಿ ಗೋಮಾಂಸದ ಕೊರತೆಯಿಲ್ಲ ಎಂದು ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದ ಪಾರಿಕ್ಕರ್, ಅವಶ್ಯಕತೆ ಇದ್ದರೆ ನೆರೆಯ ರಾಜ್ಯವಾದ ಕರ್ನಾಟಕದ ನೆರವು ಪಡೆಯಲಾಗುವುದು ಎಂದಿದ್ದರು.
ಈ ಹೇಳಿಕೆಗೆ ತಕ್ಷಣ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲ, ಈ ಹೇಳಿಕೆ ವಿಪರ್ಯಾಸಕರ ಎಂದಿದ್ದರು ಹಾಗೂ ಈ ಹೇಳಿಕೆ ನೀಡುವಾಗ ಪಾರಿಕ್ಕರ್ ಮದ್ಯದ ಅಮಲಿನಲ್ಲಿದ್ದರೇ ಎಂದು ಪ್ರಶ್ನಿಸಿದ್ದರು.





