ಹಿಂದೂ ದೇವತೆಗಳನ್ನು ಸಾರಾಯಿಗೆ ಹೋಲಿಸಿದ ಎಸ್ಪಿ ಮುಖಂಡ: ರಾಜ್ಯಸಭೆಯಲ್ಲಿ ಬಿಜೆಪಿ ಪ್ರತಿಭಟನೆ

ಹೊಸದಿಲ್ಲಿ, ಜು.19: ಸಮಾಜವಾದಿ ಪಕ್ಷದ ಮುಖಂಡ ನರೇಶ್ ಅಗರ್‌ವಾಲ್ ಹಿಂದೂ ದೇವತೆಗಳ ಹೆಸರನ್ನು ಸಾರಾಯಿಗೆ ಹೋಲಿಸಿರುವುದನ್ನು ಖಂಡಿಸಿ ರಾಜ್ಯಸಭೆಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.
ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಹಲ್ಲೆ ಪ್ರಕರಣದ ಕುರಿತು ನಡೆಯುತ್ತಿದ್ದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅಗರ್‌ವಾಲ್, 1991ರಲ್ಲಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದಾಗ ನಡೆದ ಘಟನೆಯೊಂದನ್ನು ವಿವರಿಸಿದರು. ಬಳಿಕ ಜೈಲಾಗಿ ಮಾರ್ಪಟ್ಟ ಆ ಶಾಲೆಯ ಗೋಡೆಯ ಮೇಲೆ ಕೆಲವು ಹಿಂದೂ ದೇವರ ಹೆಸರನ್ನು ವಿವಿಧ ಸಾರಾಯಿ ಬ್ರಾಂಡ್‌ನ ಹೆಸರಿಗೆ ಜೋಡಿಸಲಾಗಿತ್ತು ಎಂದರು.ನಂತರ ಆಡಳಿತ ಪಕ್ಷದ ಸದಸ್ಯರನ್ನು ಉದ್ದೇಶಿಸಿ- ಈ ರೀತಿ ಬರೆದವರು ‘ನಿಮ್ಮ ಜನರು’ ಎಂದು ಹೇಳಿದರು. ಅಲ್ಲದೆ ಬಿಜೆಪಿಯವರು ‘ಹಿಂದೂ ಧರ್ಮವನ್ನು ಗುತ್ತಿಗೆ ಪಡೆದವರು’ ಎಂದು ಟೀಕಿಸಿದರು.
ಇದಕ್ಕೆ ಸಚಿವರೂ ಸೇರಿದಂತೆ ಬಿಜೆಪಿ ಸದಸ್ಯರು ಪ್ರತಿರೋಧ ಸೂಚಿಸಿದರು. ಹಿಂದೂ ದೇವರನ್ನು ಅವಮಾನಗೊಳಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದ ಸದಸ್ಯರು, ತಕ್ಷಣ ಅಗರ್‌ವಾಲ್ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ಮಾತನಾಡಿದ ಸಂಸದಿಯ ವ್ಯವಹಾರ ಸಚಿವ ಅನಂತ್ ಕುಮಾರ್, ಅಗರ್‌ವಾಲ್ ದೇಶದ ಬಹುಸಂಖ್ಯಾತ ಜನರ ಭಾವನೆಗಳಿಗೆ ನೋವುಂಟುಮಾಡಿದ್ದಾರೆ. ಅವರ ಹೇಳಿಕೆ ಇಡೀ ಸಮುದಾಯಕ್ಕೆ ನೋವುಂಟುಮಾಡಿದೆ ಎಂದರು.
ಅಗರ್‌ವಾಲ್ ಈ ರೀತಿಯ ಅವಹೇಳನಾತ್ಮಕ ಹೇಳಿಕೆಯನ್ನು ಸದನದ ಹೊರಗೆ ನೀಡಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿತ್ತಸಚಿವ ಅರುಣ್ ಜೇಟ್ಲಿ ಹೇಳಿದರು.
ಈ ರೀತಿಯ ಅವಹೇಳನಕಾರಿ ಹೇಳಿಕೆಯನ್ನು ಅಗರ್‌ವಾಲ್ ನೀಡುವಂತಿಲ್ಲ ಎಂದು ತಿಳಿಸಿದ ಸದನದ ಉಪಾಧ್ಯಕ್ಷ ಪಿ.ಜೆ.ಕುರಿಯನ್, ಅವರು ಹೇಳಿಕೆಯನ್ನು ಹಿಂಪಡೆಯಬೇಕು ಎಂದರು. ಅಲ್ಲದೆ ಇದನ್ನು ಸದನದ ಕಡತದಿಂದ ಕಿತ್ತುಹಾಕುವಂತೆ ಸೂಚಿಸಿದರು. ತನ್ನ ಹೇಳಿಕೆಯಿಂದ ಯಾವುದೇ ವ್ಯಕ್ತಿಗಳ ಭಾವನೆಗೆ ಘಾಸಿಯಾಗಿದ್ದರೆ ತಾನು ಈ ಹೇಳಿಕೆ ಹಿಂಪಡೆದುಕೊಳ್ಳುವುದಾಗಿ ಅಗರ್‌ವಾಲ್ ಹೇಳಿದರು.
ಆದರೆ ಇದರಿಂದ ತೃಪ್ತರಾಗದ ಬಿಜೆಪಿ ಸದಸ್ಯರು ಘೋಷಣೆ ಕೂಗುವುದನ್ನು ಮುಂದುವರಿಸಿದಾಗ ಸದನದ ಕಲಾಪವನ್ನು ಮುಂದೂಡಿದ ಕುರಿಯನ್, ಕಡತದಿಂದ ಕಿತ್ತು ಹಾಕಲಾದ ಹೇಳಿಕೆಯನ್ನು ವರದಿ ಮಾಡದಂತೆ ಸುದ್ದಿಮಾಧ್ಯಮದವರನ್ನು ಒತ್ತಾಯಿಸಿದರು.







