ಕೊಡಗಿನಲ್ಲಿ ಗಾಳಿ ಸಹಿತ ಭಾರೀ ಮಳೆ : ನಾಳೆ ಶಾಲಾ, ಕಾಲೇಜುಗಳಿಗೆ ರಜೆ

ಮಡಿಕೇರಿ, ಜು.19: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಹಾಮಳೆಯಿಂದ ಜೀವನದಿ ಕಾವೇರಿ ಮೈದುಂಬಿಕೊಂಡಿದ್ದು, ಪ್ರಸಕ್ತ ಸಾಲಿನ ಪ್ರಥಮ ಪ್ರವಾಹ ಕಾಣಿಸಿಕೊಳ್ಳುವ ಮೂಲಕ ಕಾವೇರಿಯ ಕೇತ್ರ ಭಾಗಮಂಡಲ ಜಲಾವೃತಗೊಂಡು ದ್ವೀಪವಾಗಿ ಪರಿಣಮಿಸಿದೆ.
ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ವರ್ಷಾಧಾರೆಯ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಜು.20 ರಂದು ಜಿಲ್ಲೆಯ ಎಲ್ಲಾ ಶಾಲಾ ಕಾಲೆೇಜುಗಳಿಗೆ ಒಂದು ದಿನದ ರಜೆಯನ್ನು ಘೋಷಿಸಿದ್ದಾರೆ.
ಜಿಲ್ಲಾ ಕೇಂದ್ರ ಮಡಿಕೆೇರಿ ಸೇರಿದಂತೆ ಕಾವೇರಿ, ಲಕ್ಷ್ಮಣತೀರ್ಥ ನದಿ ಪಾತ್ರದ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾಗಮಂಡಲ ಸೇರಿದಂತೆ ದಕ್ಷಿಣ ಕೊಡಗಿನ ಹಲವೆಡೆಗಳಲ್ಲಿ ನದಿಯ ಪ್ರವಾಹದಿಂದ ರಸ್ತೆಗಳು ಮುಳುಗಡೆಯಾಗಿ ಸಂಚಾರ ದುಸ್ತರವಾಗಿ ಪರಿಣಮಿಸಿದೆ. ಮತ್ತೆ ಕೆಲವೆಡೆಗಳಲ್ಲಿ ಬರೆಕುಸಿತ ಸಂಭವಿಸಿದೆ.
ಕಳೆದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ಭಾಗಮಂಡಲ ಮತ್ತು ತಲಕಾವೇರಿ ವ್ಯಾಪ್ತಿಯಲ್ಲಿ ತಲಾ 8 ಇಂಚಿಗೂ ಹೆಚ್ಚಿನ ಮಳೆಯಾಗುವುದರೊಂದಿಗೆ, ಬುಧವಾರ ಬೆಳಗ್ಗಿನ ಅವಧಿಯಲ್ಲೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿ ಉಕ್ಕಿ ಹರಿಯುವ ಮೂಲಕ ಪ್ರವಾಹವೇರ್ಪಟ್ಟಿತು. ಇದರಿಂದ ಅಲ್ಲಿನ ಭಾಗಮಂಡಲ ಮತ್ತು ಅಯ್ಯಂಗೇರಿ ರಸ್ತೆಗಳ ಮೇಲೆ 3 ರಿಂದ 4 ಅಡಿಗಳಷ್ಟು ಪ್ರವಾಹದ ನೀರು ಆವರಿಸಿಕೊಂಡು ಭಾಗಮಂಡಲ ಅಕ್ಷರಶಃ ದ್ವೀಪವಾಗಿ ಮಾರ್ಪಟ್ಟು ಗ್ರಾಮಸ್ಥರು ಸಂಚಾರಕ್ಕೆ ಸಂಕಷ್ಟವನ್ನು ಎದುರಿಸುವಂತಾಯಿತು.
ಬೋಟ್ ವ್ಯವಸ್ಥೆ
ಭಾಗಮಂಡಲದಲ್ಲಿ ಪ್ರವಾಹವೇರ್ಪಟ್ಟ ಹಿನ್ನೆಲೆಯಲ್ಲಿ ಅಲ್ಲಿನ ಗ್ರಾಮಸ್ಥರ ಸಂಚಾರಕ್ಕೆ ಜಿಲ್ಲಾಡಳಿತ ಬೋಟ್ ವ್ಯವಸ್ಥೆಯನ್ನು ಕಲ್ಪಿಸಿದೆ. ಎರಡನೇ ದಿನವೂ ಮಳೆಯ ಆರ್ಭಟ ಮುಂದುವರಿದಿದ್ದು, ಇದು ಗುರುವಾರಕ್ಕು ವಿಸ್ತರಿಸಿದಲ್ಲಿ ಪ್ರವಾಹ ಅಪಾಯದ ಮಟ್ಟವನ್ನು ಮೀರುವ ಸಾಧ್ಯತೆಗಳಿದೆ.
ಕಾವೇರಿ ನದಿ ಪಾತ್ರದ ನಾಪೊಕ್ಲು, ಬಲಮುರಿ, ಸಿದ್ದಾಪುರ, ಕುಶಾಲನಗರ ವ್ಯಾಪ್ತಿಯಲ್ಲಿಯೂ ಧಾರಾಕಾರ ಮಳೆಯಾಗುತ್ತಿದ್ದು, ಕಿರು ತೊರೆ ನದಿಗಳು ಉಕ್ಕಿ ಹರಿಯುವ ಮೂಲಕ ಪುಷ್ಯ ಮಳೆಯಾರಂಭದಲ್ಲೆ ಪ್ರವಾಹ ಕಾಣಿಸಿಕೊಂಡಿದೆ.ಸೋಮವಾರಪೆೇಟೆ ವಿಭಾಗದಲ್ಲಿಯೂ ಭಾರೀ ಮಳೆೆಯಾಗುತ್ತಿದ್ದು, ಹಾರಂಗಿ ಅಣೆಕಟ್ಟಿನ ಒಳಹರಿವಿನ ಪ್ರಮಾಣ ಹೆಚ್ಚಿರುವುದು ಆಶಾದಾಯಕವಾಗಿ ಕಾಣಿಸಿಕೊಂಡು ರೈತರ ಮೊಗದಲ್ಲಿ ಸಂತಸವನ್ನು ಮೂಡಿಸಿದೆ.







