ಎಂಎಚ್370 ವಿಮಾನದ ಶೋಧದಲ್ಲಿ ಸಾಗರ ರಚನೆಯ ಮಾಹಿತಿ ಲಭ್ಯ
ಮೀನುಗಾರಿಕೆಗೆ ಹೊಸ ಸ್ಥಳಗಳ ಪತ್ತೆ

ಸಿಡ್ನಿ (ಆಸ್ಟ್ರೇಲಿಯ), ಜು. 19: ನಿಗೂಢವಾಗಿ ನಾಪತ್ತೆಯಾಗಿರುವ ಮಲೇಶ್ಯ ಏರ್‌ಲೈನ್ಸ್‌ನ ಎಂಎಚ್370 ವಿಮಾನದ ಅವಶೇಷಗಳಿಗಾಗಿ ಹಿಂದೂ ಮಹಾ ಸಾಗರದ ಬೃಹತ್ ಪ್ರದೇಶದಲ್ಲಿ ಹಲವು ವರ್ಷಗಳ ಕಾಲ ಬೃಹತ್ ಶೋಧ ಕಾರ್ಯಾಚರಣೆ ನಡೆಯಿತು. ಈ ಕಾರ್ಯಾಚರಣೆಯು ತನ್ನ ಉದ್ದೇಶವನ್ನು ಸಾಧಿಸುವಲ್ಲಿ ವಿಫಲವಾಯಿತಾದರೂ, ಸಾಗರದಾಳದ ಹಲವು ನಿಗೂಢಗಳನ್ನು ಸಂಗ್ರಹಿಸಿದೆ.
2014 ಮಾರ್ಚ್ 8ರಂದು ರಾತ್ರಿ 239 ಪ್ರಯಾಣಿಕರನ್ನು ಹೊತ್ತು ಮಲೇಶ್ಯದ ಕೌಲಾಲಂಪುರದಿಂದ ಬೀಜಿಂಗ್‌ಗೆ ಹಾರಿದ್ದ ವಿಮಾನದ ಅವಶೇಷಗಳು ಈವರೆಗೂ ಪತ್ತೆಯಾಗಿಲ್ಲ.
ಆದರೆ, ಶೋಧ ಕಾರ್ಯಾಚರಣೆಯ ವೇಳೆ ಸಂಗ್ರಹಿಸಲಾದ ಸಾಗರ ತಳದ ವಿಸ್ತೃತ ನಕಾಶೆಗಳು, ಮೀನುಗಳ ಸೆಲೆ ಮತ್ತು ಇತಿಹಾಸ ಪೂರ್ವ ಕಾಲದಲ್ಲಿ ಭೂಮಿಯ ದಕ್ಷಿಣದ ಖಂಡಗಳ ಚಲನೆಯ ಮಾದರಿಗಳ ಕುರಿತು ಮಾಹಿತಿಗಳನ್ನು ಹೊರಗೆಡಹಿವೆ.
ಹಿಂದೂ ಮಹಾಸಾಗರದ ದುರ್ಗಮ ಪ್ರದೇಶಗಳ ಶೋಧ ನಡೆದ ಬಳಿಕ ಈ ವರ್ಷದ ಜನವರಿಯಲ್ಲಿ ವಿಮಾನದ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಸಾಗರದ ಈ ದುರ್ಗಮ ಪ್ರದೇಶಗಳಲ್ಲಿ ವೌಂಟ್ ಎವರೆಸ್ಟ್‌ಗಿಂತಲೂ ಎತ್ತರದ ಸಾಗರದಡಿಯ ಪರ್ವತಗಳು ಏಳುತ್ತವೆ ಹಾಗೂ ಸಾಗರದಡಿಯ ಜ್ವಾಲಾಮುಖಿಗಳನ್ನೊಳಗೊಂಡ ನೂರಾರು ಕಿಲೋಮೀಟರ್ ಉದ್ದದ ಕಣಿವೆಗಳೂ ರೂಪುಗೊಳ್ಳುತ್ತವೆ.
ಸುಮಾರು 1.2 ಲಕ್ಷ ಚದರ ಕಿ.ಮೀ.ನಷ್ಟು ಸಾಗರ ತಳವನ್ನು ಶೋಧಿಸಲಾಗಿದ್ದು, ಲಭಿಸಿದ ವಿವರವಾದ ಮಾಹಿತಿಗಳು ಮೀನುಗಾರರು, ಸಾಗರ ವಿಜ್ಞಾನಿಗಳು ಮತ್ತು ಭೂವಿಜ್ಞಾನಿಗಳಿಗೆ ಅತ್ಯಂತ ಉಪಯುಕ್ತವಾಗಿವೆ ಪರಿಣಮಿಸಿವೆ ಎಂದು ವೆಸ್ಟರ್ನ್ ಆಸ್ಟ್ರೇಲಿಯ ವಿಶ್ವವಿದ್ಯಾನಿಲಯದಲ್ಲಿ ಕರಾವಳಿ ಸಾಗರ ಅಧ್ಯಯನದ ಪ್ರೊಫೆಸರ್ ಚರಿಟ ಪಟ್ಟಯರಚ್ಚಿ ಹೇಳುತ್ತಾರೆ.
‘‘ಶೋಧಕ್ಕೊಳಗಾದ ಸಾಗರದ ಹಲವು ಭಾಗಗಳಲ್ಲಿ ಸಾಗರ ಪರ್ವತಗಳಿವೆ. ಇವುಗಳು ಅಂತಾರಾಷ್ಟ್ರೀಯ ಆಳ ಸಮುದ್ರ ಮೀನುಗಾರರನ್ನು ಆಕರ್ಷಿಸುತ್ತವೆ’’ ಎಂದು ಪಟ್ಟಯರಚ್ಚಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ಹೇಳಿದರು.
ದುಬಾರಿ ಮೀನುಗಳಾದ ಟೂನ, ಟೂತ್‌ಫಿಶ್, ಆರೇಂಜ್ ರಫ್‌ಲಿ, ಆಲ್ಫೋನ್ಸಿನೊ ಮತ್ತು ಟ್ರೆವಲಿ ಸಮುದ್ರ ಪರ್ವತಗಳ ಹತ್ತಿರ ಹೆಚ್ಚಾಗಿ ಇರುತ್ತವೆ. ಈ ಮೀನುಗಳ ಆಹಾರವಾಗಿರುವ ಪ್ಲಾಂಕ್ಟೋನ್ ಎಂಬ ಸಮುದ್ರ ಜೀವಿಗಳು ಈ ಭಾಗದಲ್ಲಿ ಸಮುದ್ರದ ಸೆಳೆತಕ್ಕೆ ಸಿಲುಕಿ ಪೇಲವವಾಗಿ ತೇಲಿಕೊಂಡಿರುತ್ತವೆ.







