ವಿನಯ್‌ಕುಮಾರ್ ತಂಡದ ವಿಚಾರಣೆ ಚುರುಕು
ಪರಪ್ಪನ ಅಗ್ರಹಾರದ ಅಕ್ರಮ ಪ್ರಕರಣ

ಬೆಂಗಳೂರು, ಜು.19: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ವಿನಯ ಕುಮಾರ್ ನೇತೃತ್ವದ ಮೂರು ಅಧಿಕಾರಿಗಳ ತಂಡ ಜೈಲಿಗೆ ಭೇಟಿ ನೀಡಿ, ಸಿಬ್ಬಂದಿ ಸೇರಿದಂತೆ ಎಲ್ಲರನ್ನು ವಿಚಾರಣೆಗೊಳಪಡಿಸಿದೆ.
ಬುಧವಾರ ಮಧ್ಯಾಹ್ನ 3:30 ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ತನಿಖೆಯ ನೇತೃತ್ವವಹಿಸಿರುವ ನಿವೃತ್ತ ಐಎಎಸ್ ಅಧಿಕಾರಿ ವಿನಯಕುಮಾರ್, ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ರವಿ, ಮೈಸೂರು ಕಾರಾಗೃಹದ ಮುಖ್ಯ ಅಧೀಕ್ಷಕ ಆನಂದ್‌ರೆಡ್ಡಿ ಭೇಟಿ ನೀಡಿದರು ಎಂದು ಗೊತ್ತಾಗಿದೆ.
ಜೈಲಿನೊಳಗೆ ಇರುವ ಸಿಸಿಟಿವಿ ನಿಯಂತ್ರಣ ಕೊಠಡಿ, ಮಹಿಳಾ ಕೈದಿಗಳ ಹಾಗೂ ಸಜಾ ಬಂಧಿಗಳ ಕೊಠಡಿಗಳನ್ನು ತನಿಖಾ ತಂಡ ಪರಿಶೀಲಿಸಿದೆ. ಅದೇ ರೀತಿ, ಕೆಲ ಹಳೇ ಕೈದಿಗಳನ್ನು ಪ್ರಶ್ನೆ ಮಾಡಿ ಮಾಹಿತಿ ಸಂಗ್ರಹಿಸಿದೆ ಎಂದು ತಿಳಿದು ಬಂದಿದೆ.
ಆರ್.ಅನಿತಾ ವಿಚಾರಣೆ: ಕೇಂದ್ರ ಕಾರಾಗೃಹದ ಅಧೀಕ್ಷಕಿಯಾಗಿರುವ ಆರ್. ಅನಿತಾ ಅವರು ಶಶಿಕಲಾಗೆ ರಾಜಾತಿಥ್ಯ ನೀಡಲು ಟಿ.ಟಿ.ದಿನಕರನ್ ಅವರಿಂದ ತಿಂಗಳಿಗೆ 3ಲಕ್ಷ ರೂ.ಹಣ ಪಡೆಯುತ್ತಿದ್ದರು ಎನ್ನುವ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಐಎಎಸ್ ಅಧಿಕಾರಿ ವಿನಯಕುಮಾರ್ ಅವರು ಕೊಠಡಿಯೊಂದರಲ್ಲಿ ಅನಿತಾ ಅವರನ್ನು ಕರೆದು ವಿಚಾರಣೆಗೊಳಪಡಿಸಿ ಪ್ರಶ್ನಿಸಿದರು ಎಂದು ಹೇಳಲಾಗುತ್ತಿದೆ.
ತನಿಖೆ ತಂಡದ ವಿವರ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ 2 ಕೋಟಿ ಮೊತ್ತದ ಭ್ರಷ್ಟಾಚಾರ ಪ್ರಕರಣ ಕುರಿತು ತನಿಖೆಗೆ ನಿವೃತ್ತ ಐಎಎಸ್ ಅಧಿಕಾರಿ ವಿನಯಕುಮಾರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕ ಮಾಡಿದ್ದರು.
ಪ್ರಕರಣ ಸಂಬಂಧ ವಿನಯ್ ಕುಮಾರ್ ಅವರ ಅಧ್ಯಕ್ಷತೆಯ ಸಮಿತಿಯು ಒಂದು ವಾರದಲ್ಲಿ ತನ್ನ ಪ್ರಾಥಮಿಕ ವರದಿ ಸಲ್ಲಿಸಲಿದ್ದು, ಒಂದು ತಿಂಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ರಾಜ್ಯ ಸರಕಾರ ಹೇಳಿತ್ತು.
‘ಪರಪ್ಪನ ಅಗ್ರಹಾರ ಅಕ್ರಮ ಆರೋಪ ಪ್ರಕರಣ ಸಂಬಂಧ ಇಂದು ಜೈಲಿಗೆ ಭೇಟಿ ನೀಡಿ ಪ್ರಾಥಮಿಕ ತನಿಖೆ ಆರಂಭಿಸಿದ್ದು, ಜೈಲಿನೊಳಗೆ ಮಾಹಿತಿ ಕಲೆ ಹಾಕಿದ್ದೇವೆ. ಅಲ್ಲದೆ, ಸಂಪೂರ್ಣ ಮಾಹಿತಿ ದೊರೆತ ಬಳಿಕ, ನಾನೆ ಮಾಧ್ಯಮಗಳಿಗೆ ಮಾಹಿತಿ ನೀಡುವೆ’ ಎಂದು ತನಿಖಾ ತಂಡದ ಅಧ್ಯಕ್ಷತೆ ವಹಿಸಿರುವ ನಿವೃತ್ತ ಐಎಎಸ್ ಅಧಿಕಾರಿ ವಿನಯಕುಮಾರ್ ಹೇಳೀದರು.







