ನನ್ನನ್ನು ಬಿಎಸ್‌ವೈ ಸಂಪರ್ಕಿಸಿಲ್ಲ: ಹೇಮಂತ್ ನಿಂಬಾಳ್ಕರ್
ಬಿಎಸ್‌ವೈ ಪತ್ರಕ್ಕೆ ಹೊಸ ತಿರುವು
ಬೆಂಗಳೂರು, ಜು.19: ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಗರ ಪೊಲೀಸ್ ಆಯುಕ್ತರಿಗೆ ಬರೆದಿದ್ದ ಪತ್ರ ಹೊಸ ತಿರುವು ಪಡೆದುಕೊಂಡಿದ್ದು, ನನ್ನನ್ನು ಬಿ.ಎಸ್.ಯಡಿಯೂರಪ್ಪ ಸಂಪರ್ಕಿಸಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣವೂ ನನ್ನ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೂ, ಬಿ.ಎಸ್.ಯಡಿಯೂರಪ್ಪ ನಗರ ಪೊಲೀಸ್ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ನನ್ನನ್ನು ಸಂಪರ್ಕಿಸಿ, ಪ್ರಕರಣದ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಆದರೆ, ಅವರು ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ.
ಏನಿದು ಪತ್ರ?: ಪ್ರಕರಣಯೊಂದಕ್ಕೆ ಸಂಬಂಧಪಟ್ಟಂತೆ ಜು.16 ರವಿವಾರ ತಮ್ಮ ಮನೆಗೆ ಆಗಮಿಸಿ ಪೊಲೀಸರು ಶೋಧ ನಡೆಸಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿ, ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿದ್ದರು.
ರವಿವಾರ ಮುಂಜಾನೆ 2 ಗಂಟೆ ಹೊತ್ತಿಗೆ ನನ್ನ ಮನೆಗೆ ಬಂದು ತನಿಖೆ ನಡೆಸುವ ಅವಶ್ಯಕತೆ ಏನಿತ್ತು. ಸಂತೋಷ್ ನನ್ನ ಮನೆಯಲ್ಲಿ ಇಲ್ಲ ಎನ್ನುವುದು ಗೊತ್ತಿದ್ದರೂ, ಬಂದು ಪರಿಶೀಲಿಸುವ ಯತ್ನ ಏನಿತ್ತು. ಈ ವಿಚಾರ ಪ್ರಸ್ತಾಪಿಸಲು ತಮ್ಮ ದೂರವಾಣಿ ಸಂಖ್ಯೆಗೆ ಕರೆ ಮಾಡಿದೆ. ಆದರೆ, ಸಾಧ್ಯವಾಗಲಿಲ್ಲ. ಇದಾದ ನಂತರ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಜತೆ ಚರ್ಚಿಸಿದ್ದೇನೆ. ತಮಗೆ ಈ ಮೂಲಕ ಮಾಹಿತಿ ತಲುಪಿಸುತ್ತಿದ್ದೇನೆ ಎಂದು ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದರು.
ಆದರೆ, ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ಬಿ.ಎಸ್.ಯಡಿಯೂರಪ್ಪ ನನ್ನನ್ನು ಸಂಪರ್ಕಿಸಿಲ್ಲ. ಅಲ್ಲದೆ, ಬಿ.ಎಸ್.ಯಡಿಯೂರಪ್ಪ ಅವರು ನನ್ನ ಹೆಸರು ಏಕೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಗೊತ್ತಿಲ್ಲ ಎಂದಿದ್ದಾರೆ.







