ಇಂಧನ ಇಲಾಖೆಯ ಗುತ್ತಿಗೆ ಕಾರ್ಮಿಕರ ಖಾಯಾಮಾತಿಗೆ ಆಗ್ರಹ
ಬೆಂಗಳೂರು, ಜು. 19: ಇಂಧನ ಇಲಾಖೆಯ ಎಲ್ಲ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಕೂಡಲೆ ಖಾಯಂಗೊಳಿಸಬೇಕು ಎಂದು ಕಾರ್ಮಿಕ ಮುಖಂಡ ವಿ.ಜೆ.ಕೆ.ನಾಯರ್ ಒತ್ತಾಯಿಸಿದ್ದಾರೆ.
ಬುಧವಾರ ನಗರದ ಶಿಕ್ಷಕರ ಸದನದಲ್ಲಿ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್ (ಸಿಐಟಿಯು) ಆಯೋಜಿಸಿದ್ದ ಎರಡನೇ ರಾಜ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ಅವರು ಮಾತನಾಡಿದರು.
ಇಂಧನ ಇಲಾಖೆಯ ಎಲ್ಲ ವಿಭಾಗಗಳಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರ ಖಾಯಂಗೊಳಿಸಲು ಸರಕಾರ ಮುಂದಾಗಬೇಕು. ಸುಪ್ರೀಂ ಕೋರ್ಟ್‌ನ ಆದೇಶದಂತೆ 21ಸಾವಿರ ರೂ.ಗಳನ್ನು ನಿಗದಿಪಡಿಸಬೇಕು. ನೇರ ನೇಮಕಾತಿಯಲ್ಲಿ ತಮಿಳುನಾಡು, ಆಂಧ್ರ ರಾಜ್ಯ ಸರಕಾರಗಳು ಖಾಯಂ ಮಾಡಿದಂತೆ ಇಲ್ಲಿಯೂ ಮಾಡಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಅಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿ, ರಾಜ್ಯದಲ್ಲಿ ಈ ವರ್ಷದಲ್ಲಿ ಸಂಭವಿಸಿರುವವಿದ್ಯುತ್ ಅಪಘಾತಗಳಲ್ಲಿ ಗುತ್ತಿಗೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟ ಕುಟುಂಬಗಳಿಗೆ ಸರಕಾರ ಅಗತ್ಯ ನೆರವು ನೀಡಿಲ್ಲ. ಈ ಕುರಿತು ಹೋರಾಟ ನಡೆಸದಿದ್ದರೆ ಈ ಪ್ರಕರಣಗಳು ಮುಚ್ಚು ಹೋಗುವ ಪರಿಸ್ಥಿತಿ ಇದೆ ಎಂದು ಅಸಹಾಯಕತೆ ತೋಡಿಕೊಂಡರು.
ಅಖಿಲ ಭಾರತ ವಿದ್ಯುತ್ ನೌಕರರ ಒಕ್ಕೂಟದ ಕೆ.ಓ.ಹಬೀಬ್ ಮಾತನಾಡಿ, 1970ರ ಗುತ್ತಿಗೆ ಪದ್ಧತಿ ನಿಯಂತ್ರಣ ಮತ್ತು ನಿಷೇಧದ ಕಾಯಿದೆ ಪ್ರಕಾರ ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾದ ಗುತ್ತಿಗೆದಾರರು ಕಾನೂನಿಗೆ ಪ್ರಕಾರದ ಸವಲತ್ತುಗಳನ್ನು ಕಾರ್ಮಿಕರಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಮ್ಮೇಳನದಲ್ಲಿ ರೈತ ಮುಖಂಡ ಪುಟ್ಟಣ್ಣಯ್ಯ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಫೆಡರೇಷನ್ ಅಧ್ಯಕ್ಷ ಜೆ.ಸತ್ಯಬಾಬು, ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಸಮ್ಮೇಳನಕ್ಕೂ ಮುನ್ನ ನಗರದ ರೈಲ್ವೆ ನಿಲ್ದಾಣದಿಂದ ಶಿಕ್ಷಕರ ಸದನದವರೆಗೆ ಕಾರ್ಮಿಕರು ಬೃಹತ್ ರ್ಯಾಲಿ ನಡೆಸಿದರು.







