ಹಗರಣಗಳನ್ನು ಮರೆ ಮಾಚಲು ಕನ್ನಡ ಧ್ವಜ ಬಳಕೆ: ಬಿಎಸ್‌ವೈ ಆರೋಪ

ಬೆಂಗಳೂರು, ಜು.19: ರಾಜ್ಯ ಸರಕಾರ ತನ್ನ ಮೇಲಿರುವ ಹಗರಣಗಳನ್ನು ಮರೆ ಮಾಚುವ ಸಲುವಾಗಿ ಕನ್ನಡ ಧ್ವಜ ವಿಷಯವನ್ನು ಮುನ್ನೆಲೆಗೆ ತರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಬುಧವಾರ ನಗರದ ಬಿಜೆಪಿ ಕಚೇರಿಯಲ್ಲಿ ರಾಜ್ಯ ಕುಂಬಾರರ ಸಂಘದ ಅಧ್ಯಕ್ಷ ಶಿವಕುಮಾರ್ ಚೌಡಕಟ್ಟಿ ಹಾಗೂ ವಿಧಾನಸಭೆಯ ನಿವೃತ್ತ ಕಾರ್ಯದರ್ಶಿ ಸಿ.ರಾಜಣ್ಣ ರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಜಮ್ಮು ಕಾಶ್ಮೀರವನ್ನು ಹೊರತು ಪಡಿಸಿ ದೇಶದ ಯಾವುದೇ ರಾಜ್ಯದಲ್ಲಿ ನಾಡ ಧ್ವಜಕ್ಕೆ ಸಂವಿಧಾನಬದ್ಧವಾದ ಮಾನ್ಯತೆ ಇಲ್ಲ. ಈ ವಿಚಾರ ರಾಜ್ಯ ಸರಕಾರಕ್ಕೆ ಸ್ಪಷ್ಟವಾಗಿ ಅರಿವಿದ್ದರೂ ತನ್ನ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರವನ್ನು ಮರೆ ಮಾಚುವ ಸಲುವಾಗಿ ರಾಜ್ಯಧ್ವಜವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಕಿಡಿಕಾರಿದರು.
ಕನ್ನಡ ಭಾಷೆ ಬಗ್ಗೆ ನಮಗೂ ಅಪಾರವಾದ ಗೌರವವಿದೆ. ಕನ್ನಡ ಜನ, ಭಾಷೆ, ನೆಲ-ಜಲ, ಸಂಸ್ಕೃತಿ ಆಚಾರ-ವಿಚಾರಗಳಲ್ಲಿ ನಾವೆಂದೂ ರಾಜಿಯಾಗುವುದಿಲ್ಲ. ನಮ್ಮ ಪಕ್ಷ ಅಧಿಕಾರದಲ್ಲಿದ್ದ ವೇಳೆ ಮಾತೃ ಭಾಷೆಗೆ ಸಾಕಷ್ಟು ನೆರವು ನೀಡಿದೆ. ಆದರೆ, ಚುನಾವಣೆ ಹತ್ತಿರವಾಗುವ ಸಂದರ್ಭದಲ್ಲಿ ಕನ್ನಡ ಧ್ವಜದ ಹೆಸರಿನಲ್ಲಿ ರಾಜಕೀಯ ಮಾಡಬಾರದು ಎಂದು ಅವರು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಜನರು ನೆಮ್ಮದಿಯಾಗಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಎಲ್ಲೆಡೆ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಈ ಭ್ರಷ್ಟ ಸರಕಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಅವರು ಹೇಳಿದರು. ಈ ವೇಳೆ ಬಿಜೆಪಿ ಉಪಾಧ್ಯಕ್ಷ ಕೆ.ಪಿ.ನಂಜುಂಡಿರವರ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾದರು. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ವಿಧಾನಪರಿಷತ್ ಸದಸ್ಯ ವೀರಯ್ಯ ಮತ್ತಿತರರಿದ್ದರು.







