ಬಡ ಯುವತಿಯ ವಿವಾಹಕ್ಕೆ ನೆರವು
ಮಂಗಳೂರು, ಜು.19: ಕಸ್ಬಾ ಬೆಂಗರೆಯಲ್ಲಿ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ವತಿಯಿಂದ ಮುಸ್ಲಿಂ ಸಮಾಜದ ಬಡ ಯುವತಿಯ ಮದುವೆಗಾಗಿ ವೇದಿಕೆಯ ವತಿಯಿಂದ ಸಹಾಯಧನ ನೀಡುವ ‘ಕಣ್ತೆರೆದು ನೋಡುಗಳು’ ಕಾರ್ಯಕ್ರಮ ಇಂದು ನಡೆಯಿತು.
ತಣ್ಣೀರುಬಾವಿ ಫಾತಿಮಾ ಚರ್ಚ್‌ನ ಪ್ರಧಾನ ಧರ್ಮಗುರು ಫಾ. ಅಲ್ಬನ್ ಡಿಸೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಪ್ರಾರ್ಥನೆಗಿಂತಲೂ ದಾನ ಮಾಡುವುದು ಶ್ರೇಷ್ಠ ಎಂದರು.
ಪ್ರತಿಯೊಬ್ಬರೂ ಪರಸ್ಪರರನ್ನು ಅರ್ಥ ಮಾಡಿಕೊಂಡು ಜೀವಿಸಿದಾಗ ಸಮಾಜಕ್ಕೂ ಒಳಿತು, ರಾಷ್ಟ್ರಕ್ಕೂ ಒಳಿತು. ಈ ನಿಟ್ಟಿನಲ್ಲಿ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಕಾರ್ಯ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಯುವತಿಯ ತಂದೆ ಮುಹಮ್ಮದ್ ಸಾಲಿಯವರಿಗೆ ಸಹಾಯ ಧನವನ್ನು ಹಸ್ತಾಂತರಿಸಲಾಯಿತು.
ಮಂಗಳೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಸ್ಬಾ ಬೆಂಗರೆ ಕಿಲೇರಿ ಮಸೀದಿಯ ಖತೀಬ್ ನಾಸಿರ್ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯ ಸ್ಥಾಪಕರಾದ ಫ್ರ್ಯಾಂಕ್ಲಿನ್ ಮೊಂತೆರೊ ಪ್ರಾಸ್ತಾವಿಕವಾಗಿ ಮಾತನಾಡಿ, ತಲೆಹೊರೆ ಕಾರ್ಮಿಕರಾಗಿ ದುಡಿಯುತ್ತಿದ್ದ ಮುಹಮ್ಮದ್ ಸಾಲಿಯವರ ಮೈಮೇಲೆ ಹೊರೆಕಟ್ಟು ಬಿದ್ದು ಸೊಂಟದ ಸ್ವಾಧೀನತೆಯನ್ನು ಕಳೆದುಕೊಂಡಿದ್ದರು. ನಗರದ ಕುಲ್ಯಾಡಿಕಾರ್ಸ್ ನೂತನ್ ಸಿಲ್ಕ್ಸ್‌ನ ಮಾಲಕರು ಕಳೆದ 10 ವರ್ಷಗಳಿಂದ ಮುಹಮ್ಮದ್ ಸಾಲಿಯವರ ಕುಟುಂಬಕ್ಕೆ ಉಚಿತ ಬಟ್ಟೆಬರೆಗಳ ವ್ಯವಸ್ಥೆಯನ್ನು ಮಾಡುತ್ತಿದ್ದು, ಅವರ ಮೂಲಕ ವಿಷಯ ತಿಳಿದು ಈ ನೆರವಿನ ಕಾರ್ಯಕ್ರಮವನ್ನು ವೇದಿಕೆ ಹಮ್ಮಿಕೊಂಡಿದ್ದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗರೆ ಮುಹಿಯುದ್ದೀನ್ ಮಸೀದಿಯ ಖತೀಬ್ ಅಬ್ದುಲ್ಲ, ಮುಸ್ಲಿಂ ಸಮಾಜದ ಪ್ರಮುಖರಾದ ಸಮದ್, ಹಸನ್, ಇಬ್ರಾಹಿಂ, ಹಂಝ, ಬಿ.ಜೆ.ಪಿ.ಯ ಮೀನುಗಾರರ ಪ್ರಕೋಷ್ಟದ ಜಿಲ್ಲಾ ಸಹಸಂಚಾಲಕ ನವೀನ್ ತಣ್ಣೀರುಬಾವಿ ಹಾಗೂ ಬಿ.ಜೆ.ಪಿ. ಕಾರ್ಯಕರ್ತ ಸಲೀಂ ಬೆಂಗ್ರೆ, ಪ್ರಕಾಶ್ ಡಿಸೋಜ, ವಿಜಯ್ ಪಿಂಟೋ ಉಪಸ್ಥಿತರಿದ್ದರು.
ರೋಶನ್ ಡಿಸೋಜ ಅಶೋಕನಗರ ವಂದಿಸಿದರು.







