ಧರ್ಮವನ್ನು ತೊರೆಯಿರಿ, ಇಲ್ಲವೇ ಶಿಕ್ಷೆ ಎದುರಿಸಿ
ಚೀನಾದ ಕಮ್ಯುನಿಸ್ಟ್ ಪಕ್ಷದ ಸದಸ್ಯರಿಗೆ ಹಿರಿಯ ಅಧಿಕಾರಿ ಎಚ್ಚರಿಕೆ

ಬೀಜಿಂಗ್, ಜು. 19: ತನ್ನ ಸದಸ್ಯರು ಧರ್ಮವನ್ನು ತೊರೆದು ಪಕ್ಷದ ಸಿದ್ಧಾಂತದಲ್ಲೇ ಧರ್ಮವನ್ನು ಕಾಣಬೇಕು ಹಾಗೂ ಅದರಲ್ಲಿ ನಂಬಿಕೆ ಹೊಂದಬೇಕು ಎಂಬುದಾಗಿ ಚೀನಾ ಕಮ್ಯುನಿಸ್ಟ್ ಪಾರ್ಟಿ (ಸಿಪಿಸಿ) ಬಯಸುತ್ತದೆ ಎಂದು ಧಾರ್ಮಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ದೇಶದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಕಮ್ಯುನಿಸ್ಟ್ ಪಕ್ಷದ ಉನ್ನತ ರಾಜಕೀಯ ಸಿದ್ಧಾಂತದ ಪತ್ರಿಕೆ ‘ಕಿಯುಶಿ’ (ಸತ್ಯದರ್ಶನ)ಯಲ್ಲಿ ಲೇಖನವೊಂದನ್ನು ಬರೆದಿರುವ ಸರಕಾರಿ ಧಾರ್ಮಿಕ ವ್ಯವಹಾರಗಳ ಆಡಳಿತದ ನಿರ್ದೇಶಕ ವಾಂಗ್ ಝುವೋನ್, ಸಿಪಿಸಿ ಸದಸ್ಯರು ನಾಸ್ತಿಕರಾಗಿರಬೇಕು ಹಾಗೂ ಧಾರ್ಮಿಕ ನಂಬಿಕೆಗಳನ್ನು ಹೊಂದಿರಬಾರದು ಎಂದು ಹೇಳಿದ್ದಾರೆ.
‘‘ಪಕ್ಷದ ಸದಸ್ಯರು ಧಾರ್ಮಿಕ ನಂಬಿಕೆಗಳನ್ನು ಹೊಂದಬಾರದು. ಇದು ಎಲ್ಲ ಸದಸ್ಯರಿಗೂ ಎಚ್ಚರಿಕೆಯಾಗಿದೆ. ಪಕ್ಷದ ಸದಸ್ಯರು ಕಟ್ಟುನಿಟ್ಟಿನ ಮಾರ್ಕ್ಸ್‌ವಾದಿ ನಾಸ್ತಿಕರಾಗಿರಬೇಕು, ಪಕ್ಷದ ನಿಯಮಗಳಿಗೆ ಬದ್ಧರಾಗಿರಬೇಕು ಹಾಗೂ ಪಕ್ಷದ ನಂಬಿಕೆಗಳನ್ನು ಅನುಸರಿಸಬೇಕು. ಧರ್ಮದಲ್ಲಿ ನಂಬಿಕೆ ಬೆಳೆಸಲು ಹಾಗೂ ಅದರಲ್ಲಿ ನೆಮ್ಮದಿ ಕಾಣಲು ಅವರಿಗೆ ಅವಕಾಶವಿಲ್ಲ’’ ಎಂದು ವಾಂಗ್ ಬರೆದಿದ್ದಾರೆ.





