ಚನ್ನಗಿರಿ: ಕೊಲೆ ಪ್ರಕರಣ: ಮೂವರ ಬಂಧನ

ದಾವಣಗೆರೆ, ಜು.19: ಚನ್ನಗಿರಿ ತಾಲ್ಲೂಕಿನ ಬೆಟ್ಟಕಡೂರು ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಬುಧವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಡಾ.ಭೀಮಾಶಂಕರ್ ಗುಳೇದ್, ಗ್ರಾಮದ ಶೃತಿ, ಮಂಜುನಾಥ್ ಮತ್ತು ಗೋವಿಂದಪ್ಪ ಬಂಧಿತ ಆರೋಪಿಗಳು.
ಜುಲೈ 15 ರಂದು ಮಲ್ಲಿಗೇನಹಳ್ಳಿಯ ಸಿದ್ದೇಶ್ ಎಂಬ ವ್ಯಕ್ತಿಯ ಶವ ಅಡಿಕೆ ತೋಟದಲ್ಲಿ ಪತ್ತೆಯಾಗಿದ್ದ ಪ್ರಕರಣದ ಸಂಬಂಧ ತನಿಖೆ ನಡೆಸಿದ ಪೊಲಿಸರಿಗೆ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವುದು ಗೊತ್ತಾಗಿದೆ. ಶೃತಿ ಎಂಬ ಮಹಿಳೆಯೊಂದಿಗೆ ಮೃತ ಸಿದ್ದೇಶ್ ಮೂರು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದ. ಇದರ ನಡುವೆ ಶೃತಿ ಕಳೆದ ಎರಡು ತಿಂಗಳಿಂದ ಮಂಜುನಾಥ್ ಎಂಬಾತನೊಂದಿಗೂ ಇದೇ ರೀತಿಯ ಸಂಬಂಧ ಹೊಂದಿದ್ದಳು. ಈ ವಿಷಯ ತಿಳಿದ ಸಿದ್ದೇಶ್ ಜು.14 ರ ರಾತ್ರಿ ಶೃತಿ ಮನೆಗೆ ಹೋದ ಸಂದರ್ಭದಲ್ಲಿ ಮಂಜುನಾಥ್ ಕೂಡ ಅಲ್ಲಿಯೆ ಇದ್ದ. ಈ ವೇಳೆ ಇಬ್ಬರಿಗೂ ಗಲಾಟೆ ನಡೆದು, ಮಂಜುನಾಥ್ ಡ್ರಿಪ್‌ವೈರ್‌ನಿಂದ ಸಿದ್ದೇಶನ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಸಾಯಿಸಿ ನಂತರ ಶೃತಿ ಮನೆಯ ಹಿಂಭಾಗದ ತೋಟದಲ್ಲಿ ಇಟ್ಟು, ತಡರಾತ್ರಿ ತನ್ನ ಸ್ನೇಹಿತ ಗೋವಿಂದಪ್ಪನ ಸಹಾಯದಿಂದ ಸಿದ್ದೇಶನ ಶವವನ್ನು ಬೇರೆಡೆ ಇಟ್ಟು ಬಂಧಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಭೀಮಾಶಂಕರ್ ಗುಳೇದ್ ತಿಳಿಸಿದರು.
ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಸಿಪಿಐ ಆರ್.ಆರ್.ಪಾಟೀಲ್, ಪಿಎಸ್‌ಐ ವೀರಬಸ್ಪಪ ಕುಸಲಾಪುರ ಸೇರಿದಂತೆ ಎಲ್ಲ ಸಿಬ್ಬಂದಿಗೆ ಬಹುಮಾನ ಘೋಷಿಸಲಾಗಿದೆ ಎಂದು ತಿಳಿಸಿದರು.





