ರಾಜ್ಯಾದ್ಯಂತ ‘ಮೂರು ನುಡಿ-ನೂರು ದುಡಿ’ ಕಾರ್ಯಕ್ರಮ: ಎಚ್.ಆಂಜನೇಯ

ಬೆಂಗಳೂರು, ಜು.19: ‘ಶಿಕ್ಷಣ-ಸಂಘಟನೆ-ಹೋರಾಟ’ ಎಂಬ ಬಾಬಾ ಸಾಹೇಬ್ ಅಂಬೇಡ್ಕರ್‌ರ ಮೂರು ನುಡಿಗಳು ತಮ್ಮ ಕೊರಳು ಮತ್ತು ಬೆರಳ ಕೌಶಲ್ಯಗಳಾಗಿ ‘ಸಾಮಾಜಿಕ ನ್ಯಾಯ’ವನ್ನು ಎತ್ತಿ ಹಿಡಿದ ಹಿನ್ನೆಲೆಯಲ್ಲಿ ಜು.20ರಂದು ರಾಜ್ಯಾದ್ಯಂತ ‘ಮೂರು ನುಡಿ-ನೂರು ದುಡಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಶಿಕ್ಷಣ-ಸಂಘಟನೆ-ಹೋರಾಟ’ ಈ ಮೂರು ನುಡಿಗಳನ್ನು ಅಂಬೇಡ್ಕರ್ ತಮ್ಮ ‘ಬಹಿಷ್ಕೃತ ಹಿತಕಾರಣಿ ಸಭಾ’ದ ಘೋಷವಾಕ್ಯವಾಗಿ 1924ರ ಜು.20ರಂದು ಅಳವಡಿಸಿಕೊಂಡಿದ್ದರು ಎಂದರು.
ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮಕ್ಕೆ ಅಂದು ಸಂಜೆ 6 ಗಂಟೆಗೆ ಚಾಲನೆ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಹೋರಾಟದ ಹಾಡುಗಳು, ಪ್ರಗತಿಪರ ಹಾಡುಗಳು, ಚರ್ಮವಾದ್ಯಗಳು ಹಾಗೂ ವಿದ್ವಾಂಸರಿಂದ ಅಂಬೇಡ್ಕರ್ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು. ರಾಜ್ಯದ 30 ಜಿಲ್ಲೆಗಳಲ್ಲೂ ಏಕಕಾಲಕ್ಕೆ ಸಂಜೆ 6 ಗಂಟೆಯಿಂದ 6.30ಕ್ಕೆ ಚರ್ಮವಾದ್ಯಗಳನ್ನು ನುಡಿಸುವ ಮೂಲಕ ದಲಿತ ಸಂಸ್ಕೃತಿಯ ಸಂದೇಶವನ್ನು ಇಡೀ ರಾಜ್ಯಕ್ಕೆ ತಲುಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆಂಜನೇಯ ತಿಳಿಸಿದರು.
ಬೀದಿನಾಟಕಗಳ ಮೂಲಕ ಸಮಾವೇಶಕ್ಕೆ ಚಾಲನೆ: ಜು.15 ರಿಂದ 20ರವರೆಗೆ ಮೂರು ಬೀದಿನಾಟಕ ತಂಡಗಳಿಗೆ ನಾಡಿನ ಪ್ರಸಿದ್ಧ ರಂಗ ನಿರ್ದೇಶಕರು, ಸಂಗೀತ ನಿರ್ದೇಶಕರಿಂದ ತರಬೇತಿ ಶಿಬಿರವನ್ನು ನಡೆಸಿ ಬೀದಿ ನಾಟಕ ಹಾಗೂ ಹೋರಾಟದ ಹಾಡುಗಳನ್ನು ಸಿದ್ಧಗೊಳಿಸಲಾಗಿದೆ ಎಂದು ರಂಗಾಯಣದ ನಿರ್ದೇಶಕ ಎಚ್.ಜನಾರ್ದನ(ಜನ್ನಿ) ತಿಳಿಸಿದರು.
ಮೈಸೂರು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಿಂದ ಹೊರಟ ಬೀದಿನಾಟಕ ತಂಡಗಳು ಶ್ರೀರಂಗಪಟ್ಟಣ, ಮಂಡ್ಯ, ರಾಮನಗರಗಳಲ್ಲಿ ಪ್ರದರ್ಶನ ನೀಡಿ ಬೆಂಗಳೂರು ತಲುಪಲಿವೆ. ಹಾಗೆಯೇ ಚಾಮರಾಜನಗರದಿಂದ ಹೊರಟ ತಂಡವು ಕೊಳ್ಳೆಗಾಲ, ಮಳವಳ್ಳಿ, ಕನಕಪುರಗಳ ಮೂಲಕ ಬೆಂಗಳೂರು ಸೇರಲಿವೆ. ಹಾಸನ ತಂಡವು ಅರಕಲಗೂಡಿನಲ್ಲಿ ಚಾಲನೆಗೊಂಡು ಕೆ.ಆರ್.ಪೇಟೆ, ಕುಣಿಗಲ್, ನೆಲಮಂಗಲಗಳಲ್ಲಿ ಪ್ರದರ್ಶನ ನೀಡಿ ಬೆಂಗಳೂರು ತಲುಪಲಿದೆ ಎಂದು ಅವರು ಹೇಳಿದರು.
ಈ ಮೂರು ಬೀದಿನಾಟಕ ತಂಡಗಳು ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ, ಹಾಸ್ಟೆಲ್‌ಗಳಲ್ಲಿ ದಿನಕ್ಕೆ ಮೂರರಿಂದ ನಾಲ್ಕು ಪ್ರದರ್ಶನ ನೀಡುವುದರ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಂತಾರಾಷ್ಟ್ರೀಯ ಸಮ್ಮೇಳನದ ಬಗ್ಗೆ ಪ್ರಚಾರ ನೀಡಲಾಗಿದೆ. ಬೀದಿನಾಟಕಗಳ ಪ್ರಚಾರ ಕಾರ್ಯದ ಸಮಾರೋಪ ಸಮಾರಂಭವು ಜು.20ರಂದು ಸಂಜೆ 5 ಗಂಟೆಗೆ ನಗರದ ಪುರಭವನದ ಎದುರು ಆಯೋಜಿಸಲಾಗಿದೆ ಎಂದು ಜನಾರ್ದನ ತಿಳಿಸಿದರು.
ನಾಟಕೋತ್ಸವ: ಅಂಬೇಡ್ಕರ್ ಅವರ ಸಂಘರ್ಷಮಯ ಜೀವನದ ಸೂಕ್ಷ್ಮತೆ ಗಳನ್ನು ಅನಾವರಣಗೊಳಿಸುವ ನಾಟಕೋತ್ಸವವನ್ನು ಜು.19 ರಿಂದ 24ರವರೆಗೆ ನಗರದಲ್ಲಿರುವ ಗುರುನಾನಕ್ ಭವನದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಆಯೋಜಿಸಲಾಗಿದೆ ಎಂದು ರಂಗಕರ್ಮಿ ಬಸವಲಿಂಗಯ್ಯ ತಿಳಿಸಿದರು.
ಜು.19ರಂದು ಡಾ.ಬಾಬಾ ಸಾಹೇಬ ಅಂಬೇಡ್ಕರ್, ಜು.20ರಂದು ದೇವನಾಂ ಪ್ರಿಯ ಅಶೋಕ, ಜು.21 ಭೀಮಗೀತಗಾಯನ ಹಾಗೂ ಶುದ್ಧವಂಶ, ಜು.23ರಂದು ಅಂಬೇಡ್ಕರ್ ಹಾಗೂ ಜು.24ರಂದು ನನ್ನ ಅಂಬೇಡ್ಕರ್ ನಾಟಕವನ್ನು ಪ್ರದರ್ಶಿಸ ಲಾಗುತ್ತಿದ್ದು, ಉಚಿತ ಪ್ರವೇಶಾವಕಾಶವನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಕೋಟಗಾನಹಳ್ಳಿ ರಾಮಯ್ಯ, ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಾವಳ್ಳಿ ಶಂಕರ್, ರಂಗಕರ್ಮಿ ಕಪ್ಪಣ್ಣ ಉಪಸ್ಥಿತರಿದ್ದರು.







