ಸಿಡಿದು ಬಡಿದು ಜಾನುವಾರು ಸಾವು
ಉಡುಪಿ, ಜು.19: ಕಾರ್ಕಳ ತಾಲೂಕಿನ ಜಾರ್ಕಳದಲ್ಲಿ ಸಿಡಿಲು ಬಡಿದು ಹಸುವೊಂದು ಮೃತಪಟ್ಟ ಘಟನೆ ಸೋಮವಾರ ರಾತ್ರಿ ವರದಿಯಾಗಿದೆ. ಲಕ್ಷ್ಮಿ ಎಂಬವರಿಗೆ ಸೇರಿದ ಹಸು ಸಿಡಿಲು ಬಡಿದು ಮೃತಪಟ್ಟಿದ್ದು, 10,000 ರೂ. ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ.
ಅದೇ ದಿನ ಬೀಸಿದ ಗಾಳಿಗೆ ಕಾರ್ಕಳ ತಾಲೂಕು ಕುಚ್ಚೂರು ಗ್ರಾಮದ 12ಕ್ಕೂ ಅಧಿಕ ಮನೆಗಳು ಭಾಗಶ: ಹಾನಿಯಾಗಿದ್ದು ಇದರಿಂದ ಸುಮಾರು ಒಂದು ಲಕ್ಷ ರೂ. ಮೌಲ್ಯದ ಸೊತ್ತು ಹಾನಿಗೊಂಡಿರುವ ಬಗ್ಗೆ ವರದಿಯಾಗಿದೆ.
ಬುಧವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಪಳ್ಳಿ ಗ್ರಾಮದ ಸಂಜೀವಿ ಆಚಾರ್ತಿ ಎಂಬವರ ಮನೆ ಗಾಳಿ-ಮಳೆಗೆ ಭಾಗಶ: ಹಾನಿಗೊಂಡಿದ್ದು 8,000 ರೂ. ನಷ್ಟದ ಅಂದಾಜು ಮಾಡಲಾಗಿದೆ. ಇಂದು ಅಪರಾಹ್ನ 3 ಗಂಟೆಯ ಸುಮಾರಿಗೆ ಕೌಡೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆ ಮೇಲೆ ಮಾವಿನ ಮರ ಬಿದ್ದು, ಕೆಲಕಾಲ ವಾಹನ ಸಂಚಾರ ಸ್ಥಬ್ಧಗೊಂಡಿರುವ ಬಗ್ಗೆ ವರದಿಯಾಗಿದೆ.
ಕುಂದಾಪುರ ಗ್ರಾಮದ ಮೊಳಹಳ್ಳಿ ಗ್ರಾಮದ ಅಣ್ಣಪ್ಪ ಎಂಬವರ ಮನೆಯ ಮರಬಿದ್ದು 15,000 ರೂ.ಗಳಿಗೂ ಅಧಿಕ ನಷ್ಟವಾಗಿದೆ ಎಂದು ಕುಂದಾಪುರ ತಾಲೂಕು ಕಚೇರಿಯಿಂದ ತಿಳಿದುಬಂದಿದೆ.





