ಜಾನುವಾರು ಕಳ್ಳನೆಂದು ಮಾನಸಿಕ ಅಸ್ವಸ್ಥನಿಗೆ ಥಳಿಸಿದರು !

ರಾಂಚಿ, ಜು. 19: ಜಾನುವಾರ ಕಳ್ಳ ಎಂದು ಭಾವಿಸಿ 26 ವರ್ಷದ ಮಾನಸಿಕ ಅಸ್ವಸ್ಥನನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ಧನ್‌ಬಾದ್ ಗ್ರಾಮದಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಪೊಲೀಸರು ಆತನನ್ನು ರಕ್ಷಿಸಿದ್ದಾರೆ. ಮಕ್ಕಳ ಅಪಹರಣಕಾರರು ಎಂಬ ವದಂತಿ ಹಿನ್ನೆಲೆಯಲ್ಲಿ ಜಾರ್ಖಂಡ್‌ನಲ್ಲಿ ಏಳು ಮಂದಿಯನ್ನು ಥಳಿಸಿ ಹತ್ಯೆಗೈದ ಘಟನೆಯ ಒಂದು ತಿಂಗಳ ಬಳಿಕ ಈ ಘಟನೆ ನಡೆದಿದೆ.
ವಸೈಪುರದ ಅಫ್ರೋಜ್‌ನನ್ನು ಬುಧವಾರ ದನಗಳ ಜೊತೆಗೆ ನಾಗರಿಕರು ನೋಡಿದ್ದು, ಜಾನುವಾರ ಕಳ್ಳನೆಂದು ಶಂಕಿಸಿ ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.ಆತ ಜಾನುವಾರ ಕಳ್ಳ ಸಾಗಾಟಗಾರ ಅಲ್ಲ. ದನಗಳನ್ನು ಕದಿಯಲು ಬಂದ ಕಳ್ಳನಲ್ಲ. ಮೂರು ದನಗಳೊಂದಿಗೆ ಆತನನ್ನು ನೋಡಿದ ಗ್ರಾಮ ನಿವಾಸಿಗಳು ಆತ ಜಾನುವಾರು ಕಳ್ಳನೆಂಬ ತೀರ್ಮಾನಕ್ಕೆ ಬಂದರು ಎಂದು ಪೂರ್ವ ಬಸುರಿಯಾದ ಒಪಿ ಉಸ್ತುವಾರಿ ಪ್ರೇಮ್‌ಚಂದ್ರ ಹನ್ಸ್‌ದಾ ತಿಳಿಸಿದ್ದಾರೆ.
ಮಾನಸಿಕ ಅಸ್ವಸ್ಥತೆಯ ಹಿನ್ನೆಲೆಯಲ್ಲಿ ಆತನಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಆದುದರಿಂದ ಗ್ರಾಮ ನಿವಾಸಿಗಳು ಆತನನ್ನು ಜಾನುವಾರು ಕಳ್ಳನೆಂದು ಭಾವಿಸಿದರು ಎಂದು ಅವರು ತಿಳಿಸಿದ್ದಾರೆ.





