ಉದ್ಘಾಟನೆಗೂ ಮೊದಲೇ ಶಿಥಿಲಗೊಂಡ ಕಾಲೇಜಿನ ನೂತನ ಹೆಚ್ಚುವರಿ ಕಟ್ಟಡ
ಹಳೆಯ ಕಟ್ಟಡ ದುರಸ್ಥಿಗೆ ಅನುಧಾನ ಬಿಡುಗಡೆಗೊಳಿಸುವಂತೆ ಒತ್ತಾಯ

ಮೂಡಿಗೆರೆ, ಜು.20: ಡಿಎಸ್‌ಬಿಜಿ ಪ್ರಥಮ ದರ್ಜೆ ಕಾಲೇಜಿನ ಹೊಸದಾಗಿ ನಿರ್ಮಿಸಿರುವ ಹೆಚ್ಚುವರಿ ಕಟ್ಟಡ ಉದ್ಘಾಟನೆಗೆ ಮೊದಲೇ ಮೇಲ್ಚಾವಣಿಯಿಂದ ಮಳೆ ನೀರು ಸೋರಿಕೆಯಾಗುತ್ತಿದೆ. ಕಳೆದ 3 ತಿಂಗಳ ಹಿಂದೆ ಕಾಮಗಾರಿ ಪೂರ್ಣಗೊಂಡಿರುವ ಈ ಹೆಚ್ಚುವರಿ ಕೊಠಡಿಗಳಿಗೆ 1.ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಗುತ್ತಿಗೆದಾರನೋರ್ವ ನಿರ್ಮಿಸಿದ 6 ಕೊಠಡಿಗಳ ಈ ಹೊಸ ಕಟ್ಟಡದಲ್ಲಿ ವಿದ್ಯಾರ್ಥಿಗಳನ್ನು ಕೂಳ್ಳಿರಿಸಿ ಪಾಠ ಮಾಡಲು ಸಾಧ್ಯವೇ ಇಲ್ಲ. ವಿದ್ಯಾರ್ಥಿಗಳ ತಲೆಯ ಮೇಲೆ ಕಟ್ಟಡದ ಮೇಲ್ಚಾವಣಿ ಕುಸಿದು ಬೀಳುತ್ತದೆ ಎಂಬ ಭಯವಾಗುತ್ತದೆ ಎಂದು ಉಪನ್ಯಾಸಕರೊಬ್ಬರು ಅಸಹಾಯಕತೆಯಿಂದ ಸುದ್ಧಿಗಾರರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಹೊಸ ಕಟ್ಟಡದ ಕೆಲ ಭಾಗದಲ್ಲಿ ಕಾಮಗಾರಿ ಪೂರ್ತಿಗೊಳಿಸದೇ ಹಾಗೆಯೆ ಉಳಿಸಿ ಗುತ್ತಿಗೆದಾರರು ಕಾಲ್ಕಿತ್ತಿದ್ದಾರೆ. ಕಟ್ಟಡದ ಒಳ ಭಾಗದಲ್ಲಿ ಈಗಾಗಲೆ ಪೊದೆಗಳು ಬೆಳೆದುಬಿಟ್ಟಿದೆ. ಗೋಡೆ, ಕಿಟಕಿ, ಬಾಗಿಲು, ವಿದ್ಯುತ್ ಸಂಪರ್ಕ ಸಹಿತ ನೆಲಕ್ಕೆ ಅಳವಡಿಸಿರುವ ಟೈಲ್ಸ್‌ಗಳು ಕಳಪೆ ಗುಣಮಟ್ಟದ್ದಾಗಿದೆ. ಕಟ್ಟಡದ ಯಾವ ಕೆಲಸಗಳು ಸಮರ್ಪಕವಾಗಿ ನಡೆದಿಲ್ಲ. ಎಲ್ಲವೂ ಅರ್ಧಂಬರ್ಧ ಮುಗಿಸಿ ಉಳಿದರ್ಧವನ್ನು ಹಾಗೆಯೆ ಉಳಿಸಿ ಗುತ್ತಿಗೆದಾರ ಇತ್ತ ಕಡೆ ತಲೆ ಹಾಕಿಲ್ಲ. ಕಾಲೇಜಿನ ಹಳೆಯ ಕಟ್ಟಡವೂ ಯೋಗ್ಯವಾಗಿಲ್ಲ. ಮಳೆ ಬಂದೊಡನೆ ಮಹಡಿಯ ಮೇಲ್ಚಾವಣಿಯಿಂದ ಕಾಲೇಜಿನ ಎಲ್ಲಾ ಕೊಠಡಿಗಳು ಹಾಗೂ ಹೊರಾಂಗಣ ಮತ್ತು ಸಭಾಂಗಣದಲ್ಲಿ ಮಳೆ ನೀರು ಸೋರಿಕೆಯಾಗಿ ಕೆಸರುಗದ್ದೆಯಂತಾಗಿದೆ. ವಿದ್ಯಾರ್ಥಿಗಳಿಗೆ ಸರಿಯಾಗಿ ಪೀಠೋಪಕರಣಗಳಿಲ್ಲ. ಹಳೆಯ ಕಾಲದ ಮರದ ಡೆಸ್ಕ್‌ಗಳು ಹಾಗೂ ಬೇಂಚ್‌ಗಳಲ್ಲಿ ಕುಳಿತು ವಿದ್ಯಾರ್ಥಿಗಳು ಪಾಠ ಕೇಳುವ ಪರಿಸ್ಥಿತಿ ಉಂಟಾಗಿದೆ.
ಈ ಶಾಲೆಯ ಕಟ್ಟಡದ ದುರಸ್ಥಿಗೆಂದು ಅನುಧಾನ ಬಿಡುಗಡೆ ಮಾಡಲು ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗಾಗಲೇ ಕಾಲೇಜು ಕಟ್ಟಡ ಪೂರ್ತಿ ದುರಸ್ಥಿಗೆಂದು ಇಂಜಿನಿಯರ್ ಪ್ಲಾನ್ ಮಾಡಿ, ಅನುಧಾನ ಬಿಡುಗಡೆಗಾಗಿ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಕಾಲೇಜಿನ ಹಳೆಯ ವಿದ್ಯಾರ್ಥಿ ಜೆ.ಎಸ್.ರಘು ಹೇಳಿಕೆಯಲ್ಲಿ ತಿಳಿಸಿದ್ದಾರೆ.







