ಅಸೆಂಬ್ಲಿ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗೆ ಮಾತ್ರ ಕಾಂಗ್ರೆಸ್ ಟಿಕೆಟ್: ದಿನೇಶ್ ಗುಂಡೂರಾವ್

ಕಡೂರು, ಜು.20: 2108ರ ವಿಧಾನಸಭಾ ಚುನಾವಣೆಯಲ್ಲಿ ಜನರ ಮಧ್ಯೆ ಇದ್ದು, ಕಾರ್ಯಕರ್ತರ ಬೆಂಬಲ ಇರುವ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಈ ಬಾರಿ ಟಿಕೇಟ್ ಎಂದು ಕೆಪಿಸಿಸಿ ಕಾಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು. ಅವರು ಪಟ್ಟಣದ ಬನಶಂಕರಿ ಸಮುಧಾಯಭವನದಲ್ಲಿ ಏರ್ಪಡಿಸಿದ್ದ ಕಡೂರು ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ಟಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಜನರ ಮಧ್ಯೆ ಇರುವ ಮತ್ತು ಕಾರ್ಯಕರ್ತರ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಪಕ್ಷದ ಟಿಕೇಟ್ ನೀಡಲಾಗುವುದು. ಪಕ್ಷಕ್ಕೆ ದ್ರೋಹ ಮಾಡುವ ಮತ್ತು ಚೂರಿ ಹಾಕುವವರನ್ನು ದೂರ ಮಾಡುವ ಉದ್ದೇಶದಿಂದ ಚುನಾವಣೆಗೆ 3 ತಿಂಗಳ ಮೊದಲೇ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದರು.
ಮುಂದಿನ 2018ರ ವಿಧಾನಸಭಾ ಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ನೇತೃತ್ವದಲ್ಲಿ ನಡೆಸುವುದಾಗಿ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ. ಜನರು ಕಾಂಗ್ರೆಸ್ ಪಕ್ಷಕ್ಕೆ 5 ವರ್ಷಗಳ ಅಧಿಕಾರ ನೀಡಿದ್ದಾರೆ. 5 ವರ್ಷ ಪೂರೈಸಿದ ನಂತರವೇ ಚುನಾವಣೆ ನಡೆಯಲಿದೆ. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆಗೆ ಅವಕಾಶವಿಲ್ಲ ಎಂದು ಹೇಳಿದರು.ಆದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ 165 ಭರವಸೆಗಳಲ್ಲಿ 150 ಭರವಸೆಗಳನ್ನು ಈಡೇರಿಸಿದೆ. ಕೇಂದ್ರದ ಮೋದಿ ಸರ್ಕಾರ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ ಎಂದು ಟೀಕಿಸಿದರು.
ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮಾಡೆಲ್ ಸರ್ಕಾರವಾಗಿದೆ, ಈ ಸರ್ಕಾರ ದೇಶದಲ್ಲಿ ಹೆಸರು ಮಾಡುತ್ತಿದೆ. ಸಿದ್ದರಾಮಯ್ಯ ಬಡವರಿಗಾಗಿ ಅನೇಕ ಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರ ರೂ. 50 ಸಾವಿರ ಸಾಲವನ್ನೂ ಸಹ ಮನ್ನಾ ಮಾಡಿದೆ. ರಾಜ್ಯ ಸರ್ಕಾರ ಭಷ್ಟ್ರಚಾರ ರಹಿತವಾದ ಆಡಳಿತ ನೀಡುತ್ತಿದೆ, ಆದರೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ 3 ಜನ ಮುಖ್ಯಮಂತ್ರಿಗಳನ್ನು ಜನತೆ ನೋಡಿದ್ದಾರೆ, ಬಿಜೆಪಿಯ ಮುಖ್ಯಮಂತ್ರಿ ಸೇರಿ 11 ಜನ ಸಚಿವರು ಜೈಲು ಪಾಲಾಗಿದ್ದಾರೆ, ಕಾಂಗ್ರೆಸ್ ಸರ್ಕಾರದಲ್ಲಿ ಈ ರೀತಿಯ ಯಾವುದೇ ಪ್ರಕರಣಗಳು ನಡೆದಿಲ್ಲ ಎಂದರು.
ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ವಿನಾಯಕ್, ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್. ವಿಜಯಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜು, ನೈರುತ್ಯ ಪದವಿದರ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಎಸ್.ಪಿ. ದಿನೇಶ್, ತರೀಕೆರೆ ಶಾಸಕ ಜಿ.ಎಸ್. ಶ್ರೀನಿವಾಸ್, ಎ.ಎನ್. ಮಹೇಶ್, ಸಚಿನ್ ವೀಗಾ, ಎಂ.ಎಲ್. ಮೂರ್ತಿ, ಕೆ.ಎಸ್. ಆನಂದ್, ವನಮಾಲದೇವರಾಜು, ಮತ್ತಿತರರಿದ್ದರು.







