ಗೋಶಾಲೆಯಲ್ಲಿ ಹಸಿವಿನಿಂದ 30 ದನಗಳ ಸಾವು, ನೂರಾರು ದನಗಳ ಸ್ಥಿತಿ ದಯನೀಯ

ಹೈದರಾಬಾದ್ : ಆಂಧ್ರ ಪ್ರದೇಶದ ಗೋಶಾಲೆಯೊಂದರಲ್ಲಿ ಸುಮಾರು 30 ದನಗಳು ಹಸಿವಿನಿಂದ ನರಳಿ ಸಾವನ್ನಪ್ಪಿವೆಯೆಂದು ತಿಳಿದು ಬಂದಿದೆ. ದೇಶದ ಹಲವೆಡೆ ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕರನ್ನು ಕೊಲ್ಲಲಾಗುತ್ತಿರುವ ಸಮಯದಲ್ಲಿ ಈ ಪ್ರಾಣಿಗಳು ನಿರ್ಲಕ್ಷ್ಯದಿಂದ ಸಾವನ್ನಪ್ಪುತ್ತಿರುವುದು ವಿಪರ್ಯಾಸವೇ ಸರಿ.
ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡದಲ್ಲಿರುವ ಸೊಸೈಟಿ ಫಾರ್ ಪ್ರಿವೆನ್ಶನ್ ಆಫ್ ಕ್ರುಯೆಲ್ಟಿ ಟುವರ್ಡ್ಸ್ ಎನಿಮಲ್ಸ್ ಸಂಸ್ಥೆಯ ಆವರಣದಲ್ಲಿ ರಾಶಿಗಟ್ಟಲೆ ಸೆಗಣಿಯೊಂದಿಗೆ ಈ ದನಗಳ ಕಳೇಬರಗಳು ಕೊಳೆತು ನಾರುತ್ತಿರುವುದನ್ನು ಅಧಿಕಾರಿಗಳು ಕಂಡಿದ್ದಾರೆ. ಸುಮಾರು 14 ದನಗಳ ಕಳೇಬರಗಳು ಮಂಗಳವಾರ ಪತ್ತೆಯಾಗಿದ್ದರೆ ನಾಲ್ಕು ದನಗಳು ಬುಧವಾರ ಸಾವಿಗೀಡಾಗಿದ್ದವು.
ಆ ಆಶ್ರಯತಾಣದಲ್ಲಿ ಬದುಕುಳಿದಿರುವ ಸುಮಾರು 400 ಪ್ರಾಣಿಗಳ ಪರಿಸ್ಥಿತಿ ದಯನೀಯವಾಗಿತ್ತು. ಸುಮಾರು 20 ಗೋವುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದ್ದು ಇನ್ನು ಕೆಲವು ಪ್ರಾಣಿಗಳನ್ನು ಇಂದು ಬೇರೆಡೆಗೆ ಸಾಗಿಸಲಾಗುತ್ತಿದೆ.
ಈ ಗೋಶಾಲೆಯಲ್ಲಿ ಬಡ ಪ್ರಾಣಿಗಳಿಗೆ ಮೇವು ಯಾ ನೀರು ಕೂಡ ಇಲ್ಲವಾಗಿದ್ದು ಹಲವು ಸಮಯದಿಂದ ಅವುಗಳು ಹಸಿವಿನಿಂದ ನರಳುತ್ತಿದ್ದಿರಬೇಕು, ಎಂದು ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕರಾದ ವಿ ವೆಂಕಟೇಶ್ವರ ರಾವ್ ತಿಳಿಸಿದ್ದಾರೆ.
ಆ ಗೋಶಾಲೆಯಲ್ಲಿ ಬದುಕುಳಿದ ದನಗಳ ಪರಿಸ್ಥಿತಿ ಕೂಡ ದಯನೀಯವಾಗಿತ್ತಲ್ಲದೆ ಅವುಗಳಿಗೆ ಪೌಷ್ಠಿಕಾಂಶಗಳನ್ನು ಇಂಜೆಕ್ಷನ್ ಮೂಲಕ ಕೂಡ ಕೊಡುವುದು ಕಷ್ಟಕರವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಗೋಶಾಲೆಯಲ್ಲಿ ಯಾವುದೇ ಶೆಡ್ ಇಲ್ಲವಾಗಿದ್ದು ಸುಮಾರು 200 ಪ್ರಾಣಿಗಳಿಗೆ ಸಾಕಾಗುವಷ್ಟು ಸ್ಥಳದಲ್ಲಿ 45 ದನಗಳನ್ನು ಅಮಾನವೀಯವಾಗಿ ಕೂಡಿ ಹಾಕಲಾಗಿತ್ತು. ಅಲ್ಲಿ ಸ್ವಚ್ಛತೆಯ ಕುರುಹೇ ಇರಲಿಲ್ಲ ಹಾಗೂ ಸೆಗಣಿ ಮತ್ತು ಕೊಳಚೆಯಿಂದ ಸ್ಥಳ ನಾರುತ್ತಿತ್ತು. ಗೋಕಳ್ಳರಿಂದ ರಕ್ಷಿಸಲ್ಪಟ್ಟ ದನಗಳು ಹಾಗೂ ಎತ್ತುಗಳನ್ನು ಇಲ್ಲಿ ಇಡಲಾಗುತ್ತಿತ್ತು.
ಗೋಶಾಲೆ ನಡೆಸುತ್ತಿರುವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗೋಪಾಲ್ ಆರ್ ಸುರಬತುಲ ಪ್ರಕಾರ ಕಳೆದ ಕೆಲ ದಿನಗಳಿಂದ 20 ದನಗಳು ಸತ್ತಿವೆಯಾದರೂ ಅಧಿಕಾರಿಗಳು ವಿಚಾರವನ್ನು ಉತ್ಪ್ರೇಕ್ಷಿಸುತ್ತಿದ್ದಾರೆ ಎಂದು ಹೇಳಿದರು.







