ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ
.jpg)
ಹಾಸನ, ಜು.20: ನಗರದ ರವೀಂದ್ರ ನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಮಹಿಳಾ ಸಮಾಜದ ಸಭಾಂಗಣದಲ್ಲಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ, ಹಾಗೂ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ರತ್ನ ಅವರು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮನುಷ್ಯನಿಗೆ ಆರೋಗ್ಯ ಇದ್ದರೇ ಏನಾದರೂ ಸಾಧನೆ ಮಾಡಬಹುದು. ಇಲ್ಲವಾದರೇ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದರು. ಎಷ್ಟೆ ಕೆಲಸದ ಒತ್ತಡ ಇದ್ದರೂ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಗಮನ ಇರಬೇಕು ಎಂದು ಕಿವಿಮಾತು ಹೇಳಿದರು. ಉಚಿತ ಆರೋಗ್ಯ ತಪಾಸಣೆ ಕೆಲಸ ಒಂದು ರೀತಿ ಧರ್ಮದ ಕೆಲಸವಾಗಿದೆ. ಇಂತಹ ಕಾರ್ಯಕ್ರಮವನ್ನು ಹೆಚ್ಚು ಹೆಚ್ಚು ಆಯೋಜಿಸುವಂತೆ ಕರೆ ನೀಡಿದರು.
ಮಣಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಾದ ಸೌಮ್ಯಮಣಿ ಮಾತನಾಡಿ, ಹೆಣ್ಣು ಅಂದ ಮೇಲೆ ಏನಾದರೂ ಒಂದು ಸಮಸ್ಯೆ ಇದ್ದೆ ಇರುತ್ತದೆ. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದು ಮುಖ್ಯ. ಮುಟ್ಟು ಆದ ದಿನದಿಂದಲೂ ಕೊನೆವರೆಗೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲೇ ಬೇಕು ಎಂದು ಕಿವಿಮಾತು ಹೇಳಿದರು. ಪ್ರತಿಯೊಬ್ಬರೂ ಆರೋಗ್ಯವಂತರಾಗಬೇಕು ಎಂಬುದು ಇದ್ದೆ ಇರುತ್ತದೆ. 40 ವರ್ಷ ದಾಟಿದ ಮೇಲೆ ಕೆಲ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಸಲಹೆ ನೀಡಿದರು. ಆರೋಗ್ಯ ಉತ್ತಮವಾಗಿರುವಾಗಲೇ ಕಾಯಿಲೆ ಬರುವುದನ್ನು ಮೊದಲೆ ತಿಳಿದುಕೊಂಡು ಚಿಕಿತ್ಸೆ ಪಡೆದರೇ ಮುಂದೆ ಆರೋಗ್ಯವಂತರಾಗಿ ಇರಬಹುದು ಎಂದರು.
ಹೇಮಾವತಿ ಆಸ್ಪತ್ರೆಯ ವೈದ್ಯರು ವಿನಯ ರಘುನಾಥ್ ಮಾತನಾಡುತ್ತಾ, ಮನುಷ್ಯನಾಗಿ ಹುಟ್ಟಿದ ಮೇಲೆ ಖಾಯಿಲೆ ಬಂದೆ ಬರುತ್ತದೆ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮೂಲಕ ಖಾಯಿಲೆ ತಡೆಗಟ್ಟಬಹುದು. ಜೀವನ ಎಂಬುದು ಅತಿ ವೇಗವಾಗಿದೆ. ಪ್ರತಿ ಹಂತದಲ್ಲೂ ವೇಗ ಕಾಣುತ್ತಿದ್ದೇವೆ. ಆರೋಗ್ಯ ಎಂದರೆ ಕೇವಲ ದೇಹಕ್ಕಲ್ಲ. ಮಾನಸಿಕವಾಗಿಯೂ ಇರಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಿಳಾ ಸಮಾಜದವರು ಪಾಲ್ಗೊಂಡು ಉಚಿತ ಆರೋಗ್ಯ ತಪಾಸಣಾ ಶಿಬಿರದ ಉಪಯೋಗ ಪಡೆದುಕೊಂಡರು.
ಇದೆ ವೇಳೆ ವೈದ್ಯರಾದ ವಿನಯ, ವಾತ್ಸಲ್ಯ ಆಸ್ಪತ್ರೆಯ ಪ್ರಶಸ್ತಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರೀತಮ್ ಜೆ. ಗೌಡ, ಚಂದ್ರು, ನಂದನ, ನಿರಂಜನ್ ಇತರರು ಪಾಲ್ಗೊಂಡಿದ್ದರು.







