ಗಾಳಿಗೆ ಉರುಳಿದ ಮರ, ಮನೆ ಜಖಂ

ಸಿದ್ದಾಪುರ, ಜು. 20: ಸಿದ್ದಾಪುರದಲ್ಲಿ ಮಳೆಯ ಪ್ರಮಾಣ ಕಡಿಮೆಯಾದ ಬೆನ್ನಲ್ಲೇ ಗುರುವಾರ ಮದ್ಯಾಹ್ನ ಬೀಸಿದ ಭಾರೀ ಗಾಳಿಯಿಂದಾಗಿ ವಿವಿಧೆಡೆ ಮರ ಉರುಳಿ ಬಿದ್ದಿದ್ದು, ಮನೆ, ವಿದ್ಯುತ್ ಕಂಬ ಮತ್ತು ಶೀಟ್‌ಗಳಿಗೆ ಹಾನಿಯುಂಟಾಗಿದೆ.
ಹಳೆಯ ಸಿದ್ದಾಪುರದ ರಾಯ್‌ಗೋಡು ತೋಟದ ಲೈನ್ ಮನೆಯ ಮೇಲೆ ಬಾರಿ ಗಾತ್ರದ ಮರ ಬಿದ್ದಿದ್ದು ಹೆಂಚುಗಳು ಸಂಪೂರ್ಣ ನಾಶಗೊಂಡಿದೆ. ಅದೃಷ್ಠವಶಾತ್ ಲೈನ್ ಮನೆಯ ಸಮೀಪದಲ್ಲೆ ವಾಸವಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ನೆಲ್ಯಹುದಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡದ 8 ಶೀಟ್‌ಗಳು ಹಾರಿ ಹೋಗಿದ್ದು, ಸಾವಿರಾರು ರೂ.ಗಳ ನಷ್ಟ ಸಂಭವಿಸಿದೆ. ಮೈಸೂರು ರಸ್ತೆಯ ಕೆಸನಹಳ್ಳ ಸಮೀಪ ಸಿದ್ದಾಪುರ-ಮೈಸೂರು ರಸ್ತೆಗೆ ಅಡ್ಡಲಾಗಿ ದೊಡ್ಡ ಮರ ಬಿದ್ದ ಪರಿಣಾಮ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಕುಂಬಾರ ಗುಂಡಿಯಯಲ್ಲಿ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಆ ಭಾಗದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗುಹ್ಯ ಗ್ರಾಮದ ಕೂಡುಗದ್ದೆಯಲ್ಲಿ ಬರೆ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಗ್ರಾಮದಲ್ಲಿ ಬರೆ ಕುಸಿದ ಸ್ಥಳಕ್ಕೆ ಈ ಭಾಗದ ಗ್ರಾ.ಪಂ ಸದಸ್ಯರಾದ ರೆಜಿತ್ ಕುಮಾರ್, ಪ್ರತಿಮ ಚಂದ್ರಶೇಖರ್, ಶಿವಕುಮಾರ್ ಮತ್ತು ಶೈಲ ಭೇಟಿ ನೀಡಿ ಪರಿಶೀಲಿಸಿದರು.





