ಹಳದಿ-ಕೆಂಪು ಬಣ್ಣದ ಧ್ವಜವನ್ನೇ ಮುಂದುವರಿಸುವಂತೆ ವಾಟಾಳ್ ಆಗ್ರಹ

ಬೆಂಗಳೂರು, ಜು. 20: ರಾಜ್ಯದ ನೂತನ ಧ್ವಜ ವಿನ್ಯಾಸಕ್ಕಾಗಿ ಸರಕಾರ ರಚನೆ ಮಾಡಿರುವ ಸಮಿತಿಯನ್ನು ಹಿಂಪಡೆದು, ಈಗ ಬಳಕೆಯಲ್ಲಿರುವ ಹಳದಿ-ಕೆಂಪು ಧ್ವಜವನ್ನೇ ಮುಂದುವರಿಸಬೇಕು ಎಂದು ಕನ್ನಡ ಚಳವಳಿಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ 50 ವರ್ಷಗಳಿಂದ ಬಳಕೆ ಮಾಡುತ್ತಿರುವ ರಾಜ್ಯಧ್ವಜದಲ್ಲಿ ಯಾವುದೇ ಕಾರಣಕ್ಕೂ ಒಂದು ಗೆರೆಯಷ್ಟು ಬದಲಾವಣೆಯಾಗಬಾರದು. ಕನ್ನಡ ನಾಡಿನ ಸ್ವಾಭಿಮಾನದ ಸಂಕೇತವಾಗಿರುವ ಧ್ವಜದ ಬಗ್ಗೆ ಚರ್ಚೆ ಮಾಡುತ್ತಿರುವವರಿಗೆ ಇತಿಹಾಸ ಮತ್ತು ವಾಸ್ತವ ತಿಳಿದಿಲ್ಲ. ಧ್ವಜ ವಿನ್ಯಾಸಕ್ಕಾಗಿ ಸಮಿತಿ ರಚನೆ ಮಾಡಿರುವ ಸರಕಾರದ ಕ್ರಮಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಹೀಗಾಗಿ ಸಮಿತಿ ರದ್ಧು ಮಾಡಿ, ಈಗಿರುವ ಧ್ವಜವನ್ನೇ ಅಧಿಕೃತ ಎಂದು ಪ್ರಕಟಿಸಬೇಕು ಎಂದು ಆಗ್ರಹಿಸಿದರು.
1966ರ ಆ.21ರಂದು ಮೊದಲ ಬಾರಿಗೆ ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿಯಲ್ಲಿ ಹಳದಿ ಬಣ್ಣದಿಂದ ಕೂಡಿದ್ದು, ಕೆಂಪು ಗೆರೆಯಲ್ಲಿ ಕರ್ನಾಟಕ ನಕ್ಷೆಯನ್ನು ಬಿಡಿಸಿ ನಕ್ಷೆಯೊಳಗೆ ಹಸಿರು ಬಣ್ಣದಲ್ಲಿ ಏಳು ದಳಗಳ ಪೈರಿನ ಚಿತ್ರ ಚಿತ್ರಿಸಿದ್ದ ಕನ್ನಡ ಧ್ವಜವನ್ನು ರಾಷ್ಟ್ರಧ್ವಜದ ಜೊತೆಯಲ್ಲೇ ಹಾರಿಸಲಾಯಿತು. ಅನಂತರ ಉಂಟಾದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದಾಗಿ 1967 ರಲ್ಲಿ ಹಳದಿ-ಕೆಂಪು ಮಿಶ್ರಿತ ಧ್ವಜ ರೂಪಿಸಲಾಗಿದೆ ಎಂದು ಅವರು ವಿವರಿಸಿದರು.
ಅಮೆರಿಕ, ನೇಪಾಳ ಸೇರಿದಂತೆ ಅನೇಕ ದೇಶಗಳಲ್ಲಿರುವ ಕನ್ನಡ ಸಂಘಗಳು ಹಳದಿ-ಕೆಂಪು ಬಣ್ಣದ ಧ್ವಜ ಬಳಸುತ್ತಿವೆ. 25 ವರ್ಷಗಳಿಂದ ರಾಜ್ಯದಲ್ಲಿ ಸರಕಾರ ಅಧಿಕೃತವಾಗಿ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವ ಸೇರಿದಂತೆ ಎಲ್ಲ ಸರಕಾರಿ ಕಾರ್ಯಕ್ರಮಗಳಲ್ಲೂ ಇದನ್ನೇ ಬಳಕೆ ಮಾಡಲಾಗಿದೆ ಎಂದ ಅವರು, ಈ ಹಿಂದೆ ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದಾಗ ಕನ್ನಡದ ಧ್ವಜಕ್ಕೆ ಕಾನೂನಿನ ಮಾನ್ಯತೆ ನೀಡಿದ್ದಾರೆ. ಆದರೂ, ಈಗ ಸರಕಾರ ಧ್ವಜ ವಿನ್ಯಾಸ ಬದಲಾವಣೆಗೆ ಸಮಿತಿ ರಚಿಸಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯ ಸರಕಾರ ಧ್ವಜ ವಿನ್ಯಾಸ ಬದಲಾವಣೆಗಾಗಿ ಸಮಿತಿ ರಚಿಸುವ ಮೊದಲು 57 ವರ್ಷಗಳಿಂದ ಕನ್ನಡಕ್ಕಾಗಿ ಹೋರಾಟ ನಡೆಸುತ್ತಿರುವ ನನ್ನನ್ನಾಗಲಿ, ಇತರೆ ಕನ್ನಡ ಹಾಗೂ ಜನಪರ ಸಂಘಟನೆಗಳ ಜೊತೆಗಾಗಲಿ ಚರ್ಚೆ ನಡೆಸಿಲ್ಲ ಎಂದ ಅವರು, ಸರಕಾರ ನೇಮಿಸಿರುವ ಈ ಸಮಿತಿಗೆ ಯಾವ ಮಾನದಂಡ ನೀಡಲಾಗಿದೆ ಎಂಬುದನ್ನು ಬರಂಗಪಡಿಸಿಲ್ಲ. ಕನಿಷ್ಠ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಶಾಸನ ಸಭೆಯಲ್ಲಿ ಅಂಗೀಕಾರ ಪಡೆದಿದ್ದರೆ ಸಮಿತಿಗೆ ಸಾಂವಿಧಾನಿಕ ಅಧಿಕಾರವಾದರೂ ಇರುತ್ತಿತ್ತು. ಈಗ ರಚಿಸಿರುವ ಸಮಿತಿಗೆ ಯಾವುದೇ ಮಾನ್ಯತೆ ಇಲ್ಲ ಎಂದು ಹೇಳಿದರು.
ಬಿಜೆಪಿಗೆ ನೈತಿಕತೆ ಇಲ್ಲ: ಕನ್ನಡ ನಾಡಿನ ಜನರ ಸ್ವಾಭಿಮಾನದ ಸಂಕೇತ ಹಾಗೂ ನಾಡಿನ ಸಾಂಸ್ಕೃತಿಕತೆ ಎತ್ತಿ ತೋರಿಸುವ ಮತ್ತು ಜನರನ್ನು ಭಾವನಾತ್ಮಕವಾಗಿ ಒಂದು ಮಾಡಿರುವ ಕನ್ನಡ ಧ್ವಜವನ್ನು ವಿರೋಧ ಮಾಡುತ್ತಿರುವ ಬಿಜೆಪಿಗೆ ಕನ್ನಡ ಧ್ವಜದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ವಾಟಾಳ್ ನಾಗರಾಜ್ ದೂರಿದರು.
ಜು.29 ರಂದು ಸಮ್ಮೇಳನ: ರಾಜ್ಯ ಸರಕಾರದ ನಿರ್ಣಯವನ್ನು ಖಂಡಿಸಿ ಕನ್ನಡ ಸಂಘಟನೆಗಳ ಒಕ್ಕೂಟದಿಂದ ಜು.29 ರಂದು ನಗರದ ಉಡ್‌ಲ್ಯಾಂಡ್ ಹೊಟೇಲ್‌ನಲ್ಲಿ ಕನ್ನಡ ಭಾವುಟ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಅನಂತರ ರಾಜ್ಯಾದ್ಯಂತ ಕನ್ನಡ ಧ್ವಜ ಹಾರಿಸುವ ದಿನಾಚರಣೆಗೆ ಕರೆ ನೀಡಲಾಗುತ್ತದೆ ಎಂದು ತಿಳಿಸಿದರು.







