ನಾಮಫಲಕಕ್ಕೆ ಕಪ್ಪು ಮಸಿ ಬಳಿದು ಕರವೇ ಆಕ್ರೋಶ
ಮೆಟ್ರೋನಲ್ಲಿ ಹಿಂದಿ ಹೇರಿಕೆ ವಿರುದ್ಧ ನಿಲ್ಲದ ಕೂಗು

ಬೆಂಗಳೂರು, ಜು.20: ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ವಿವಿಧ ಮೆಟ್ರೋ ನಿಲ್ದಾಣಗಳ ನಾಮಫಲಕದ ಹಿಂದಿ ಅಕ್ಷರಗಳಿಗೆ ಕಪ್ಪುಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಮುಂಜಾನೆ 4 ಗಂಟೆಯಲ್ಲಿ ನಗರದ ಯಶವಂತಪುರ, ರಾಜಾಜಿನಗರ, ಇಂದಿರಾನಗರ, ದೀಪಾಂಜಲಿ ನಗರ, ಜಯನಗರ, ನ್ಯಾಷನಲ್ ಕಾಲೇಜು, ಮೈಸೂರು ರಸ್ತೆ ಸೇರಿ 40 ಮೆಟ್ರೋ ರೈಲು ನಿಲ್ದಾಣಗಳಲ್ಲಿರುವ ಹಿಂದಿ ನಾಮಫಲಕಕ್ಕೆ ಮಸಿ ಬಳಿದು ಹಿಂದಿ ಹೇರಿಕೆಯನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದರು.
ಹಿಂದಿ ಅಕ್ಷರಗಳಿಗೆ ಮಸಿ ಬಳಿದ ಕಾರ್ಯಕರ್ತರು ಹಿಂದಿ ಹೇರಿಕೆ ವಿರುದ್ಧ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಹಿಂದಿ ನಾಮಫಲಕಗಳನ್ನು ಹಿಂದೆಗೆದುಕೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಜ್ಯ ಸರಕಾರದ ಆದೇಶವನ್ನು ಉಲ್ಲಂಘಿಸಿ ಮೆಟ್ರೋ ನಿಗಮದ ಅಧಿಕಾರಿಗಳು ಉದ್ಧಟತನ ಮೆರೆದಿದ್ದಾರೆ ಎಂದು ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ದೂರಿದರು.ಹಿಂದಿ ಅಕ್ಷರಗಳ ನಾಮಫಲಕ ತೆರವಿಗೆ ನೀಡಿದ್ದ ಗುಡುವು ಮುಗಿದ ಹಿನ್ನಲೆಯಲ್ಲಿ ಮಸಿಬಳಿಯುವ ಹೋರಾಟ ನಡೆಸಲಾಗಿದ್ದು, ಅದಕ್ಕೂ ಮೆಟ್ರೋ ಅಧಿಕಾರಿಗಳು ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದೆಂದು ಅವರು ಎಚ್ಚರಿಕೆ ನೀಡಿದರು.
ಬಂಧನ, ಬಿಡುಗಡೆ: ಚಿಕ್ಕಪೇಟೆಯ ಬಳಿಯ ಮೆಟ್ರೋ ನಿಲ್ದಾಣದಲ್ಲಿ ಹಿಂದಿ ಅಕ್ಷರಗಳಿಗೆ ಕಾರ್ಯಕರ್ತರು ಮಸಿ ಬಳಿಯುತ್ತಿರುವ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.







