ಆತಂಕ ಬೇಡ, ಯಾವ ಬ್ಯಾಂಕನ್ನೂ ಮುಚ್ಚುವುದಿಲ್ಲ: ಆರ್‌ಬಿಐ ಸ್ಪಷ್ಟನೆ

ಹೊಸದಿಲ್ಲಿ, ಜು.20: ಸಾರ್ವಜನಿಕ ಕ್ಷೇತ್ರದ (ಸರಕಾರಿ ಸ್ವಾಮ್ಯದ) 9 ಬ್ಯಾಂಕ್‌ಗಳನ್ನು ಮುಚ್ಚಲಾಗುವುದು ಎಂದು ವಾಟ್ಸಾಪ್ ಹಾಗೂ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಆಧಾರ ರಹಿತ ಮತ್ತು ಹಾಸ್ಯಾಸ್ಪದವಾಗಿದೆ . ಈ ಸುಳ್ಳು ಸುದ್ದಿಯನ್ನು ನಂಬಬೇಡಿ. ಬ್ಯಾಂಕ್‌ಗಳಲ್ಲಿ ಇಟ್ಟಿರುವ ನಿಮ್ಮ ಹಣ ಸುರಕ್ಷಿತವಾಗಿದೆ ಎಂದು ವಿತ್ತ ಸಚಿವಾಲಯ ಹಾಗೂ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸ್ಪಷ್ಟಪಡಿಸಿದೆ.
ಕಾರ್ಪೊರೇಷನ್ ಬ್ಯಾಂಕ್, ಯುಕೊ ಬ್ಯಾಂಕ್ , ಐಡಿಬಿಐ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಆಂಧ್ರ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯ, ದೇನ ಬ್ಯಾಂಕ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯ- ಈ ಒಂಬತ್ತು ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ ಎಂದು ಕಳೆದ ಕೆಲ ವಾರಗಳಿಂದ ವಾಟ್ಸಾಪ್ ಗ್ರೂಫ್‌ಗಳಲ್ಲಿ ಸಂದೇಶಗಳು ನಿರಂತರವಾಗಿ ಪ್ರಸಾರವಾಗುತ್ತಿವೆ. ಈ ಆಧಾರ ರಹಿತ, ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಎಂದು ವಿತ್ತ ಸಚಿವಾಲಯ ತಿಳಿಸಿದೆ.
ವಸೂಲಾಗದ ಸಾಲ ಹೆಚ್ಚಿರುವುದರಿಂದ ಹಾಗೂ ಬಂಡವಾಳ ಕಡಿಮೆ ಇರುವ ಕಾರಣ ಈ ಬ್ಯಾಂಕ್‌ಗಳು ಅಸ್ಥಿರವಾಗಿವೆ. ಆದ್ದರಿಂದ ಇವನ್ನು ‘ತಕ್ಷಣ ಸುಧಾರಣಾ ಪ್ರಕ್ರಿಯೆ’ (ಪಿಸಿಎ)ಗೆ ಒಳಪಡಿಸಲಾಗಿದೆ. ಬ್ಯಾಂಕ್‌ಗಳು ಸಕಾಲಿಕವಾಗಿ ತಮ್ಮ ಸಾಧನೆಗಳನ್ನು ಸುಧಾರಿ ಸಬೇಕು ಎಂದು ಸೂಚಿಸಲು ಇವನ್ನು ಪಿಸಿಎ ಅಡಿ ಸೇರಿಸಲಾಗುತ್ತದೆ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಎಸ್.ಎಸ್.ಮುಂದ್ರ ತಿಳಿಸಿದ್ದಾರೆ. ಗಾಯಗೊಂಡ ಕ್ರೀಡಾಪಟುವನ್ನು ವಿಶ್ರಾಂತಿ ಪಡೆಯಲು ಸೂಚಿಸುವುದಕ್ಕೆ ಇದನ್ನು ಹೋಲಿಸಬಹುದು. ಪಿಸಿಎ ಅಡಿ ಸೇರಿಸಲಾದ ಬ್ಯಾಂಕ್‌ಗಳು ತಮ್ಮ ದೈನಂದಿನ ವ್ಯವಹಾರ(ಸಾಲ ನೀಡುವುದೂ ಸೇರಿದಂತೆ)ವನ್ನು ಎಂದಿನಂತೆಯೇ ಮುಂದುವರಿಸಲಿದೆ ಎಂದವರು ತಿಳಿಸಿದ್ದಾರೆ.
ಪಿಸಿಎ ನಿಯಮ 2002ರಿಂದಲೂ ಜಾರಿಯಲ್ಲಿದೆ. ಇದರಲ್ಲಿ ಹೊಸತೇನಿಲ್ಲ. ಆದ್ದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಈ ರೀತಿಯ ಸುದ್ದಿಯನ್ನು ಓದುವಾಗ ಸ್ವಲ್ಪ ಮಟ್ಟಿನ ‘ವಿವೇಕ’ ಉಪಯೋಗಿಸುವ ಅಗತ್ಯವಿದೆ ಎಂದು ಮುಂದ್ರ ಹೇಳಿದ್ದಾರೆ.







