ಮದುವೆಯಾಗುವುದಾಗಿ ನಂಬಿಸಿ ಮೋಸ: ಆರೋಪಿಗೆ ಶಿಕ್ಷೆ
ಚಿಕ್ಕಮಗಳೂರು, ಜು.20: ಮದುವೆಯಗುವುದಾಗಿ ನಂಬಿಸಿ ಮೋಸ ಮಾಡಿದ ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನಗರದ 1 ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯವು ತೀರ್ಪು ನೀಡಿದೆ.
ಚಿಕ್ಕಮಗಳೂರು ತಾಲ್ಲೂಕಿನ ನರಗನಹಳ್ಳಿಯ ಆರೋಪಿ ಚಂದನ್ ಎಂಬಾತ ಶಾಂತಿ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯೊಂದಿಗೆ ಮದುವೆಯಾಗುವುದಾಗಿ ನಂಬಿಸಿದ್ದ. ಆಕೆಯೊಂದಿಗೆ ದೈಹಿಕ ಸಂಪರ್ಕ ಇರಿಸಿಕೊಂಡು ಕಾಮಧೇನು ಗಣಪತಿ ದೇವಸ್ಥಾನದಲ್ಲಿ ಪರಸ್ಪರ ಮದುವೆಯಾಗಿದ್ದ.
ಉಪನೋಂದಣಾಧಿಕಾರಿ ಕಛೇರಿಗೆ ಅರ್ಜಿ ಸಲ್ಲಿಸಿದ ನಂತರ ಮದುವೆಯಾಗುವುದಿಲ್ಲ ಎಂದು ಮೋಸ ಮಾಡಿದ ಹಿನ್ನೆಲೆ ಚಿಕ್ಕಮಗಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಆರೋಪಿಗಳ ವಿರುದ್ದ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1 ನೇ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮಹೆಗಡೆ ರವರು ಆರೋಪಿ ಚಂದನ್‌ಗೆ 1 ವರ್ಷ ಜೈಲು ಶಿಕ್ಷೆ ಹಾಗೂ ರೂ. 1,50,000 ದಂಡ ವಿಧಿಸಿ ದಂಡ ಮೊತ್ತವನ್ನು ಪಿರ್ಯಾದುದಾರರಿಗೆ ನೀಡುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರಾಘವೇಂದ್ರ ರಾಯ್ಕರ್.ವಿ ಇವರು ಮೊಕದ್ದಮೆಯನ್ನು ನಡೆಸಿದ್ದರು.





