ಕಾಂಗ್ರೆಸ್, ಬಿಜೆಪಿ ಮಾತಿಗೆ ದಲಿತರು, ಯುವಜನರು ಮುರುಳಾಗಬಾರದು: ದೇವರಾಜ್

ಚಿಕ್ಕಮಗಳೂರು, ಜು.20: ಕಾಂಗ್ರೆಸ್ ಮತ್ತು ಬಿಜೆಪಿಯ ಬಣದ ಮಾತಿಗೆ ದಲಿತ ವರ್ಗ ಮತ್ತು ಯುವ ಜನತೆ ಮುರುಳಾಗಬಾರದು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಹೆಚ್.ದೇವರಾಜ್ ಕಿವಿಮಾತು ಹೇಳಿದರು.ಅವರು ಗುರುವಾರ ಜಿಲ್ಲಾ ಜೆಡಿಎಸ್ ಕಛೇರಿಯಲ್ಲಿ ನಡೆದ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
6 ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ದಲಿತರನ್ನು ಕೇವಲ ಓಟು ಬ್ಯಾಂಕ್ ಆಗಿ ಮಾತ್ರ ಬಳಸಿಕೊಂಡಿದೆ. ಚುನಾವಣೆ ಹತ್ತಿರ ಬಂದ ನಂತರ ಇದೀಗ ಕಾಂಗ್ರೆಸ್ ಮತ್ತು ಬಿಜೆಪಿಗೆ ದಲಿತರ ನೆನಪಾಗಿದೆ ಎಂದು ತಿಳಿಸಿದರು. ಹೋಟೆಲ್ ನಿಂದ ತಿಂಡಿ ತರಿಸಿಕೊಂಡು ದಲಿತರ ಮನೆಗಳಲ್ಲಿ ಕುಳಿತು ತಿನ್ನುವ ಮೂಲಕ ಬಿಜೆಪಿ ಡೊಂಗಿ ರಾಜಕಾರಣ ಮಾಡುತ್ತಿದೆ ಎಂದ ಅವರು, ಇದಕ್ಕೆ ದಲಿತರು ಮತ್ತು ಯುವ ಜನತೆ ಮರುಳಾಗಬಾರದು. ಚುನಾವಣೆ ಸಂದರ್ಭದಲ್ಲಿ ದಲಿತರು ಮತ್ತು ಯುವ ಜನತೆಯನ್ನು ಸುಳ್ಳು ಆಶ್ವಾಸನೆಯನ್ನು ನೀಡಿ ಬಳಿಸಿಕೊಳ್ಳುವ ಬಿಜೆಪಿ ಗೆದ್ದ ನಂತರ ಅವರನ್ನು ನಡು ನೀರಿನಲ್ಲಿ ಕೈ ಬಿಡುತ್ತಾರೆ ಎಂದು ಎಚ್ಚರಿಸಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ತತ್ವದಿಂದ ಜೆಡಿಎಸ್ ಕಾರ್ಯ ನಿರ್ವಹಿಸುತ್ತಿದೆ. ದಲಿತ ಅಲ್ಪಸಂಖ್ಯಾತರು ಬಡವರು, ಮಹಿಳೆಯರು ಮತ್ತು ವಿದ್ಯಾರ್ಥಿಗಳೊಂದಿಗೆ ಸದಾ ಜೊತೆ ಇರುತ್ತದೆ ಎಂದರು.
ಪ.ಜಾತಿ ಮತ್ತು ಪ.ವರ್ಗ ವಿಭಾಗದ ಜಿಲ್ಲಾಧ್ಯಕ್ಷ ದೇವಿ ಪ್ರಸಾದ್ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಯುವ ಜನತೆ ಪಕ್ಷದೊಂದಿಗೆ ಜೋಡಿಸಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ನಗರ ಅಧ್ಯಕ್ಷ ಜಯರಾಜ ಅರಸ್ ಅಧ್ಯಕ್ಷತೆ ವಹಿಸಿದರು. ಇದೇ ವೇಳೆ ಹರೀಶ್ ನೇತೃತ್ವದಲ್ಲಿ ದಂಟರಮಕ್ಕಿಯ 20 ಯುವಕರು ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಕೊಂಡಿತ್ತು. ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಹೆಚ್.ದೇವರಾಜ್ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು.
ಈ ಸಮಯದಲ್ಲಿ ಮುಖಂಡರಾದ ಜಯಕುಮಾರ್, ಚಿದಾನಂದ, ಸಿ.ಕೆ.ಮೂರ್ತಿ, ದೇವರಾಜ ಅರಸ್, ಮುಸ್ತಾಖ್, ಮಂಜುನಾಥ್, ಉಪಸ್ಥಿತರಿದ್ದರು.







