ರೈತರ ಸಾಲ ಮನ್ನಾಕ್ಕೆ ಕಾರ್ಮಿಕರ ಹಣ ಬಳಕೆಗೆ ಆಕ್ಷೇಪ
ಬೆಂಗಳೂರು, ಜು.20: ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ ರೈತರ ಸಾಲ ಮನ್ನಾದ ಹೊರೆಯನ್ನು ಇಳಿಸಿಕೊಳ್ಳಲು ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣ ಬಳಕೆ ಮಾಡಿಕೊಳ್ಳಲು ಸರಕಾರ ಚಿಂತನೆ ನಡೆಸಿರುವುದಕ್ಕೆ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೂನಿಯನ್ ಅಧ್ಯಕ್ಷ ಎನ್.ಪಿ.ಸಾಮಿ, 2007ರಿಂದ 2013ರ ವರೆಗೆ ಈ ಕಲ್ಯಾಣ ಮಂಡಳಿಗೆ 5,835.26 ಕೋಟಿ ರೂ. ಸೆಸ್ ಸಂಗ್ರಹವಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದು, ಕಟ್ಟಡ ಕಾರ್ಮಿಕರ ಅಭಿವೃದ್ಧಿ ಮಂಡಳಿ ಹಣವನ್ನು ಕಾರ್ಮಿಕರ ಅಭಿವೃದ್ಧಿ ಯೋಜನೆಗಳಿಗೆ ಮಾತ್ರ ಬಳಕೆ ಮಾಡಬೇಕು. ಈ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಇಡಬೇಕು ಎಂದು ನಿರ್ದೇಶನ ನೀಡಿದೆ.
ಆದರೆ, ಸರಕಾರ ಕಾರ್ಮಿಕ ಮಂಡಳಿಗೆ ಸಂಬಂಧಿಸಿದ ಕೆಲ ಕಾನೂನಿಗೆ ತಿದ್ದುಪಡಿ ತಂದು, ಮಂಡಳಿಯಲ್ಲಿರುವ ಕಾರ್ಮಿಕರ ಹಣವನ್ನು ಅಪೆಕ್ಸ್ ಬ್ಯಾಂಕ್‌ಗೆ ವರ್ಗಾವಣೆ ಮಾಡಲು ಮುಂದಾಗಿದ್ದಾರೆ. ಮಂಡಳಿ ಹಣವನ್ನು ಕಾರ್ಮಿಕರಿಗೆ ಮಾತ್ರ ಬಳಸುವಂತೆ ಡಿಎಒಸಿಡಬ್ಲ್ಯೂಎ ಕೇಂದ್ರ ಕಾಯ್ದೆ ಅಧ್ಯಾಯ 5ರ ಕಲಂ 22ರಲ್ಲಿಯೂ ತಿಳಿಸಲಾಗಿದೆ. ಹೀಗಾಗಿ ಕೂಡಲೇ ಸರಕಾರ ತನ್ನ ಆದೇಶ ಹಿಂಪಡೆದು ಕಟ್ಟಡ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಣ ಬಳಕೆ ಮಾಡಬೇಕು ಎಂದು ಆಗ್ರಹಿಸಿದರು.
ಕಟ್ಟಡ ನಿರ್ಮಾಣ ಕಾರ್ಮಿಕ ನಿಧಿಗೆ ಸಂಗ್ರಹವಾಗಿದ್ದ 58 ಸಾವಿರ ಕೋಟಿಗಳಲ್ಲಿ 57 ಸಾವಿರ ಕೋಟಿ ರೂ.ಗಳನ್ನು ರೈತರ ಸಾಲಮನ್ನಾಕ್ಕೆ ಬಳಸಲು ಸಿದ್ದರಾಮಯ್ಯ ಸರಕಾರ ಮುಂದಾಗಿದೆ. ಈ ಕುರಿತು ಅಧಿಕಾರಿಗಳು ಹಲವಾರು ರೀತಿಯ ತಯಾರಿಗಳನ್ನು ನಡೆಸಿದ್ದಾರೆ. ಒಂದು ವೇಳೆ ಕಲ್ಯಾಣ ನಿಧಿ ಹಣವನ್ನು ರೈತರ ಸಾಲಮನ್ನಾಕ್ಕೆ ಬಳಕೆ ಮಾಡಿದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು. ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.







