ಕೋಮುವಾದಿಗಳ ಕಂಟಕ ನಿವಾರಣೆಗೆ ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನ: ಡಾ.ಎಚ್.ಸಿ.ಮಹದೇವಪ್ಪ
ನಾಳೆ ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನ
.jpg)
ಬೆಂಗಳೂರು, ಜು.20: ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೋಮುವಾದಿ ಹಾಗೂ ಮೂಲಭೂತವಾದಿಗಳಿಂದ ಕಂಟಕ ಪ್ರಾಯವಾಗಿರುವ ಈ ಸಂದರ್ಭದಲ್ಲಿ ಅಂಬೇಡ್ಕರ್ ಆಶಯಗಳು ಪ್ರತಿಯೊಬ್ಬರಿಗೂ ತಲುಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ನಡೆಯುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮಾವೇಶವು ಹೆಚ್ಚು ಪ್ರಸ್ತುತತೆಯನ್ನು ಪಡೆದುಕೊಂಡಿದೆ ಎಂದು ಲೋಕೋಪಯೊಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದ ವತಿಯಿಂದ ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದೇಶದಲ್ಲಿ ಕೋಮುವಾದಿಗಳ ಉಪಟಳದಿಂದಾಗಿ ಪ್ರಜಾಪ್ರಭುತ್ವದ ಅಡಿಪಾಯ ಅಲುಗಾಡುತ್ತಿದೆ. ಹಾಗೂ ಸಂವಿಧಾನದ ಆಶಯಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಇವೆಲ್ಲವಕ್ಕೂ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾದರೆ ಅಂಬೇಡ್ಕರ್‌ರವರ ತತ್ವ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳುವುದು ತುರ್ತು ಅಗತ್ಯವಿದೆ ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಪ್ರಬುದ್ಧ ಭಾರತದ ನಿರ್ಮಾಣದ ಕನಸನ್ನು ಕಂಡಿದ್ದರು. ಆದರೆ, ಸ್ವಾತಂತ್ರ ಬಂದು ಇಷ್ಟು ದಿನ ಕಳೆದಿದ್ದರೂ ಅಂಬೇಡ್ಕರ್ ಆಶಯ ಈಡೇರಿಲ್ಲ. ಇದಕ್ಕಿರುವ ಕಾರಣವನ್ನು ತಿಳಿದು, ಪರಿಹಾರಗಳನ್ನು ಕಂಡುಕೊಂಡು ಪ್ರಬುದ್ಧ ಭಾರತ ನಿರ್ಮಾಣದತ್ತ ಕೊಂಡೊಯ್ಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಮೂರು ದಿನಗಳ ಕಾಲ ನಡೆಯುವ ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನ ನಾಂದಿಯಾಗಲಿ ಎಂದು ಅವರು ಆಶಿಸಿದರು. ಜುಲೈ 21 ರಿಂದ 23 ರವರೆಗೆ ನಗರದ ಜಿಕೆವಿಕೆಯಲ್ಲಿ ನಡೆಯುವ ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮಾವೇಶವನ್ನು ಮಾನವ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್-3 ಉದ್ಘಾಟಿಸಲಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರದ ಸಚಿವರುಗಳು ಭಾಗವಹಿಸಲಿದ್ದಾರೆ ಎಂದು ಲೋಕೋಪಯೋಗಿ ಸಚಿವರು ಎಚ್.ಸಿ.ಮಹದೇವಪ್ಪ ತಿಳಿಸಿದರು.
ಸಮ್ಮೇಳನದಲ್ಲಿ 400 ತಜ್ಞರು: ಮೂರು ದಿನಗಳ ಕಾಲ ನಡೆಯುವ ಡಾ.ಬಿ.ಆರ್.ಅಂಬೇಡ್ಕರ್ ಆಂತಾರಾಷ್ಟ್ರೀಯ ಸಮ್ಮೇಳನದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ 400 ತಜ್ಞರಿಂದ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ. ಇದಕ್ಕಾಗಿಯೇ 12ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು. ಇದೇ ವೇಳೆ ಅಂತಾರಾಷ್ಟ್ರೀಯ ಸಮ್ಮೇಳನ ಅಂಗವಾಗಿ ವಾರ್ತಾ ಇಲಾಖೆ ವತಿಯಿಂದ ಆಯೋಜಿಸಿದ್ದ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಸುದ್ದಿಗೋಷ್ಟಿಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ, ವಾರ್ತಾ ಇಲಾಖೆಯ ನಿರ್ದೇಶಕ ವಿಶುಕುಮಾರ್ ಉಪಸ್ಥಿತರಿದ್ದರು.
ಸಮ್ಮೇಳನದ ವಿಶೇಷತೆಗಳು
-ಅಂತಾರಾಷ್ಟ್ರೀಯ ಮಟ್ಟದ 13ವಿವಿಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದ ನೇರ ಪ್ರಸಾರ.
-ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ 400ವಿಶೇಷ ತಜ್ಞರಿಂದ ಉಪನ್ಯಾಸ
-ಸಮ್ಮೇಳನಕ್ಕೆ ಭಾಗವಹಿಸಲು 5ಸಾವಿರ ಮಂದಿ ನೋಂದಾಯಿಸಿದ್ದು, ಒಟ್ಟಾರೆ 10ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ.
-ಕನ್ನಡಕ್ಕೆ ಸಂಬಂಧಿಸಿದ 18ವಿಶೇಷ ಗೋಷ್ಟಿಗಳನ್ನು ಏರ್ಪಡಿಸಲಾಗಿದೆ.
-ರಾಜ್ಯದಿಂದ ಸುಮಾರು 175 ವಿಶೇಷ ಉಪನ್ಯಾಸಕರು ಭಾಗವಹಿಸಲಿದ್ದಾರೆ.
-ಸಂಜೆ 7ರ ನಂತರ ದಲಿತ ಕಲಾ ಮೇಳ ನಡೆಯಲಿದೆ.







