ಸಾಮರಸ್ಯ-ಸಹಭಾಳ್ವೆಗೆ ಧಕ್ಕೆ ಅಸಾಧ್ಯ: ಮುಖ್ಯಮಂತ್ರಿ
.jpg)
ಧಾರವಾಡ, ಜು.20: ಕರ್ನಾಟಕದಲ್ಲಿ ಬಸವಣ್ಣ , ಗಾಂಧಿ, ಅಂಬೇಡ್ಕರ್ ಮೂಲಕ ಸಾಮರಸ್ಯ, ಸಹಬಾಳ್ವೆ ಜಾಗೃತವಾಗಿದೆ. ಅದಕ್ಕೆ ಯಾರಿಂದಲೂ ಧಕ್ಕೆ ಉಂಟಾಗಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಸ್ಥಾಪನಾ ದಿನ, ಸಂಘದ ಪಾರಂಪರಿಕ ಕಟ್ಟಡ ಉದ್ಘಾಟನೆ, ‘ನಾಡೋಜ’ ಪಾಟೀಲ ಪುಟ್ಟಪ್ಪಅವರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಚರಿತ್ರೆ ಅರಿಯದವರು ಭವಿಷ್ಯ ನಿರ್ಮಿಸಲಾರರು. ಸಂವಿಧಾನಕ್ಕೆ ಅನುಗುಣವಾಗಿ ಎಲ್ಲರೂ ಕೆಲಸ ಮಾಡಬೇಕು. ಧಾರವಾಡದಲ್ಲಿ ವಿದ್ಯಾ ವರ್ಧಕ ಸಂಘಕ್ಕೆ 5 ಎಕರೆ ಜಾಗ, ಬೆಳವಾಡಿ ಮಲ್ಲಮ್ಮನವರ ಸ್ಮಾರಕ ನಿರ್ಮಾಣಕ್ಕೂ ಹಣ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಧಾರವಾಡದ ಐತಿಹಾಸಿಕ ಕರ್ನಾಟಕ ವಿದ್ಯಾವರ್ಧಕ ಸಂಘದ 128ನೆ ಸಂಸ್ಥಾಪನಾ ದಿನ ಆಚರಿಸುತ್ತಿರುವುದು ನಮ್ಮ ಪಾಲಿಗೆ ಮಹಾನ್ ಸುದಿನವಾಗಿದೆ. ಈ ಸಂಘದ ಅಧ್ಯಕ್ಷರಾಗಿ ಡಾ.ಪಾಟೀಲ ಪುಟ್ಟಪ್ಪ 50 ವರ್ಷಗಳು ಪೂರೈಸಿರುವ ಸಂದರ್ಭದಲ್ಲಿ, ಅವರ ಪುತ್ಥಳಿ, ಸಂಘದ ಪಾರಂಪರಿಕ ಕಟ್ಟಡ ಉದ್ಘಾಟಿಸಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಪೂರ್ವದಲ್ಲಿ, ಕರ್ನಾಟಕ ಏಕೀಕರಣದ ಮುಂಚೆ ಮುಂಬೈ ಪ್ರಾಂತ್ಯಕ್ಕೆ ಸೇರಿದ್ದ ಈ ಭಾಗದಲ್ಲಿ ಮರಾಠಿ ಪ್ರಭಾವದ ಮಧ್ಯೆ ಈ ನೆಲದ ಕನ್ನಡ ಭಾಷೆಗೆ ಪ್ರಾಶಸ್ತ್ಯ ದೊರಕಿಸಲು, ನಾಡಿನ ಸಾಹಿತ್ಯ, ಕಲೆ, ಏಕೀಕರಣ ಚಳವಳಿಗಾಗಿ ಕರ್ನಾಟಕ ವಿದ್ಯಾವರ್ಧಕ ಸಂಘ ಮಾಡಿದ ಕಾರ್ಯ ದೊಡ್ಡದು ಎಂದು ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. ಹಳೆಯ ಮೈಸೂರು, ಹೈದ್ರಾಬಾದ್-ಕರ್ನಾಟಕ ಸೇರಿದಂತೆ ಕನ್ನಡದ ಎಲ್ಲ ಪ್ರದೇಶಗಳನ್ನು ಒಗ್ಗೂಡಿಸಲು ಈ ಸಂಘ ಶ್ರಮಿಸಿದೆ. ಕನ್ನಡದ ಗಟ್ಟಿ ಧ್ವನಿಯಾಗಿರುವ ಪಾಟೀಲ ಪುಟ್ಟಪ್ಪ ಕನ್ನಡದ ಕಟ್ಟಾಳು ಆಗಿದ್ದಾರೆ. 98 ವರ್ಷದ ಅವರಲ್ಲಿ ಈಗಲೂ ಕನ್ನಡದ ಕಾಳಜಿ ಜಾಗೃತವಾಗಿದೆ. ನಾಡಿನ ವಿಷಯಕ್ಕೆ ಅವರು ನೇರ, ನಿಷ್ಠುರರಾಗಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಾಧಕರನ್ನು ಜನ ಗುರುತಿಸುತ್ತಾರೆ. ಸಾಂಸ್ಕೃತಿಕ ಕೇಂದ್ರ ವಿದ್ಯಾನಗರಿ ಧಾರವಾಡದ ಜನ ಆ ಕಾರ್ಯ ಮಾಡುತ್ತಿದ್ದಾರೆ. ಪತ್ರಿಕೆ, ಸಾಹಿತ್ಯ ಕ್ಷೇತ್ರದಲ್ಲಿ ಪಾಟೀಲ ಪುಟ್ಟಪ್ಪ ಸಾಕಷ್ಟು ಕೆಲಸ ಮಾಡಿದ್ದಾರೆ. ಚಳವಳಿಗಳಲ್ಲಿಯೂ ತೊಡಗಿಸಿಕೊಂಡ ಜ್ಞಾನಭಂಡಾರಿ ಅವರು. ಪ್ರಪಂಚ, ವಿಶ್ವವಾಣಿ ಪತ್ರಿಕೆಗಳ ಮೂಲಕ ನಾಡಿಗೆ ಸಾಕಷ್ಟು ಪ್ರೇರಣೆ, ಮಾರ್ಗದರ್ಶನ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿ ಜಿಲ್ಲೆಯಲ್ಲಿ ತಲಾ 3 ಕೋಟಿ ರೂ.ವೆಚ್ಚದಲ್ಲಿ ಗಾಂಧಿ ಭವನಗಳನ್ನು ನಿರ್ಮಿಸಲು 90 ಕೋಟಿ ರೂ.ಒದಗಿಸಲಾಗಿದೆ ಎಂದ ಅವರು, ಪಾಟೀಲ ಪುಟ್ಟಪ್ಪ ಇನ್ನೂ ನೂರು ಕಾಲ ಆರೋಗ್ಯವಾಗಿ ಬಾಳಲಿ. ವಿದ್ಯಾವರ್ಧಕ ಸಂಘದ ಸಿಬ್ಬಂದಿಯನ್ನು ಅನುದಾನಕ್ಕೆ ಒಳಪಡಿಸಲು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ಕುಲಕರ್ಣಿ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಎನ್.ಎಚ್. ಕೋನರೆಡ್ಡಿ, ಪ್ರಸಾದ್ ಅಬ್ಬಯ್ಯ, ಕರ್ನಾಟಕ ವಿದ್ಯಾ ವರ್ಧಕ ಸಂಘದ ಪದಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.







