ಕಾಶ್ಮೀರದಲ್ಲಿ ಮೇಘಸ್ಫೋಟ: ಆರು ಮಂದಿ ಸಾವು

ಶ್ರೀನಗರ, ಜು.20: ಜಮ್ಮು-ಕಾಶ್ಮೀರದ ದೋಡ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ಮೇಘಸ್ಫೋಟದ ಕಾರಣ ಸಂಭವಿಸಿದ ನೆರೆಪ್ರವಾಹದಿಂದ ಆರು ಮಂದಿ ಮೃತಪಟ್ಟಿದ್ದು 11 ಮಂದಿ ಗಾಯಗೊಂಡಿದ್ದಾರೆ. ಪ್ರವಾಹದ ಸೆಳೆತಕ್ಕೆ ಸಿಲುಕಿ ಹಲವಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಬಟೋಟ್-ಕಿಶ್ತ್‌ವಾರ್ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಬಹುತೇಕ ಪ್ರದೇಶ ಜಲಾವೃತಗೊಂಡಿದ್ದು ಆರಕ್ಕೂ ಹೆಚ್ಚು ಮನೆಗಳು ನೆರೆಯಲ್ಲಿ ಕೊಚ್ಚಿಹೋಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ಅಂಗಡಿ ಹಾಗೂ ಶಾಲೆಯೊಂದಕ್ಕೂ ಹಾನಿಯಾಗಿದ್ದು 11 ಮಂದಿಯನ್ನು ರಕ್ಷಿಸಲಾಗಿದೆ. ಭಗ್ನಾವಶೇಷಗಳಡಿಯಲ್ಲಿ ಇನ್ನಷ್ಟು ಮಂದಿ ಸಿಲುಕಿದ್ದಾರೆಂದು ಶಂಕಿಸಲಾಗಿದ್ದು ಸತ್ತವರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.
ಬೆಳಗ್ಗಿನ ಜಾವ ಸುಮಾರು 2:20ರ ವೇಳೆ ಮೇಘಸ್ಫೋಟ ಸಂಭವಿಸಿದ್ದು ಜಮಿಯ ಮಸೀದಿ ಪ್ರದೇಶದಲ್ಲಿ ಹರಿಯುವ ನಾಲೆಯಲ್ಲಿ ಏಕಾಏಕಿ ಪ್ರವಾಹ ಉಂಟಾಗಿ ನೆರೆನೀರು ಉಕ್ಕಿ ಹರಿದು ದಡದಲ್ಲಿದ್ದ ಹಲವು ಕಟ್ಟಡಗಳನ್ನು ನಾಶಗೊಳಿಸಿದೆ. ಸತ್ತವರಲ್ಲಿ ಐವರು ಮಹಿಳೆಯರು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟವರಲ್ಲಿ ನಾಲ್ಕು ಮಂದಿ ಒಂದೇ ಕುಟುಂಬಕ್ಕೆ ಸೇರಿದವರು. ದೇವ್‌ರಾಜ್ ಎಂಬ ವ್ಯಕ್ತಿಯ ಪತ್ನಿ ನಾರು ದೇವಿ (40 ವರ್ಷ), ಪುತ್ರಿಯರಾದ 14ರ ಹರೆಯದ ಸಪ್ನಾ ದೇವಿ, 7ರ ಹರೆಯದ ಪ್ರಿಯಾ ದೇವಿ, 9ರ ಹರೆಯದ ಪುತ್ರ ರಾಹುಲ್ ಮೃತಪಟ್ಟಿದ್ದಾರೆ. ಅಲ್ಲದೆ ಬಲ್‌ಗ್ರಾನ್ ಎಂಬಲ್ಲಿಯ ಪಟ್ನ ದೇವಿ(45 ವರ್ಷ) ಮತ್ತು ಶೃಷ್ಟಾ ದೇವಿ(15 ವರ್ಷ) ಮೃತಪಟ್ಟವರೆಂದು ಗುರುತಿಸಲಾಗಿದೆ. ಜಿಲ್ಲಾಡಳಿತ, ಪೊಲೀಸ್ ಮತ್ತು ಸೇನಾಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದೆ. ಬಟೋಟ್-ಕಿಶ್ತ್‌ವಾರ್ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ.







