ಮಕ್ಕಳ ಕಳ್ಳಸಾಗಣೆ ಪ್ರಕರಣ: ಬಿಜೆಪಿಯ ರೂಪಾ ಗಂಗೂಲಿ,ವಿಜಯವರ್ಗೀಯಗೆ ಸಿಐಡಿ ಸಮನ್ಸ್

ಕೋಲ್ಕತಾ,ಜು.20: ಜಲಪೈಗುರಿ ಜಿಲ್ಲೆಯಲ್ಲಿನ ಮಕ್ಕಳ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮೆದುರು ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಪೊಲೀಸರು ಗುರುವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಷ್ ವಿಜಯವರ್ಗೀಯ ಮತ್ತು ಪ.ಬಂಗಾಳ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಸಂಸದೆ ರೂಪಾ ಗಂಗೂಲಿ ಅವರಿಗೆ ಬುಲಾವ್ ಕಳುಹಿಸಿದ್ದಾರೆ.
ವಿಜಯವರ್ಗೀಯ ಮತ್ತು ಗಂಗೂಲಿ ವಿರುದ್ಧ ಕೆಲವು ಆಡಿಯೊ ಸಾಕ್ಷಗಳು ಮತ್ತು ದಾಖಲೆಗಳು ನಮಗೆ ಲಭ್ಯವಾಗಿವೆ. ತಕ್ಷಣವೇ ನಮ್ಮೆದುರು ಹಾಜರಾಗುವಂತೆ ಮತ್ತು ತನಿಖಾಧಿಕಾರಿಗಳೊಂದಿಗೆ ಸಹಕರಿಸುವಂತೆ ಅವರಿಗೆ ಸೂಚಿಸಿದ್ದೇವೆ. ಇದಕ್ಕೆ ಅವರು ತಪ್ಪಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಸಿಐಡಿ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಆರೋಪಿಗಳ ಪೈಕಿ ಓರ್ವಳಾಗಿರುವ, ಬಿಮಲಾ ಮತ್ತು ಅಕ್ಷಯ ಬಾಲಗೃಹಗಳ ಹೆಸರಿನಲ್ಲಿ ಎನ್‌ಜಿಒಗಳನ್ನು ನಡೆಸುತ್ತಿದ್ದ ಚಂದನಾ ಚಕ್ರವರ್ತಿ ತನ್ನ ಎನ್‌ಜಿಒಗಳ ಪರವಾನಿಗೆಯನ್ನು ಪುನರ್‌ನವೀಕರಿಸಲು ಈ ಇಬ್ಬರು ಬಿಜೆಪಿ ನಾಯಕರು ನೆರವಾಗಿದ್ದರು ಎನ್ನುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ತಿಳಿಸಿದ ಅಧಿಕಾರಿ, ಈ ಎನ್‌ಜಿಒಗಳಿಗೆ 22.5 ಲ.ರೂ.ಅನುದಾನವನ್ನು ಮಂಜೂರು ಮಾಡುವಂತೆ ಸರಕಾರದ ಮೇಲೆ ಅವರು ಪ್ರಭಾವ ಬೀರಿದ್ದರು ಎಂಬ ಆರೋಪವೂ ಇದೆ ಎಂದು ತಿಳಿಸಿದರು.
ತನ್ನ ಎನ್‌ಜಿಒಗಳನ್ನು ನಡೆಸಲು ವಿಜಯವರ್ಗೀಯ ಮತ್ತು ಗಂಗೂಲಿ ಇತರ ರೀತಿಗಳಿಂದಲೂ ನೆರವಾಗಿದ್ದರು ಎಂದ ಚಕ್ರವರ್ತಿ ತಿಳಿಸಿದ್ದು, ಅವರು ಯಾವ ನೆರವುಗಳನ್ನು ನೀಡಿದ್ದರು ಮತ್ತು ಅವರ ಹಿತಾಸಕ್ತಿ ಏನಿತ್ತು ಎನ್ನುವುದನ್ನು ತಿಳಿದುಕೊಳ್ಳಲು ನಾವು ಬಯಸಿದ್ದೇವೆ ಎಂದೂ ಅಧಿಕಾರಿ ಹೇಳಿದರು. ಅಮೆರಿಕ, ಸಿಂಗಾಪೂರ ಮತ್ತು ಫ್ರಾನ್ಸ್‌ನಂತಹ ದೇಶಗಳಿಗೆ ಮಕ್ಕಳನ್ನು ಅಕ್ರಮವಾಗಿ ಸಾಗಿಸಲಾಗಿದೆ ಎಂಬ ಮಾಹಿತಿಗಳು ನಮ್ಮ ಬಳಿಯಿದ್ದು, ಇದು ಗಂಭೀರ ವಿಷಯವಾಗಿದೆ ಎಂದರು.
ಚಕ್ರವರ್ತಿ ನಡೆಸುತ್ತಿದ್ದ ಬಾಲಗೃಹಗಳಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರವು ಜನವರಿಯಲ್ಲಿ ಸಿಐಡಿಗೆ ದೂರು ಸಲ್ಲಿಸಿತ್ತು. ಬಿಜೆಪಿ ನಾಯಕಿ ಜುಹಿ ಚೌಧುರಿ ಮುಖ್ಯ ಶಂಕಿತ ಆರೋಪಿ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಮಾರ್ಚ್‌ನಲ್ಲಿ ಭಾರತ-ನೇಪಾಳ ಗಡಿಯಲ್ಲಿ ಆಕೆಯನ್ನು ಬಂಧಿಸಲಾಗಿತ್ತು.
ತನ್ನ ಬಾಲಗೃಹಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಜುಹಿ ವಿಜಯವರ್ಗೀಯ ಮತ್ತು ಗಂಗೂಲಿ ಜೊತೆ ಲಾಬಿ ನಡೆಸಿದ್ದಳು ಎಂದು ಚಕ್ರವರ್ತಿ ಪೊಲೀಸರಿಗೆ ತಿಳಿಸಿದ್ದಳೆನ್ನಲಾಗಿದೆ.
ಆದರೆ ವಿಜಯವರ್ಗೀಯ ಮತ್ತು ಗಂಗೂಲಿ ವಿರುದ್ಧದ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿರುವ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು, ನಾರದ ಮತ್ತು ಶಾರದಾ ಪ್ರಕರಣಗಳಲ್ಲಿ ಸಿಬಿಐ ತನ್ನ ನಾಯಕರಿಗೆ ಸಮನ್‌ಗಳನ್ನು ನೀಡುತ್ತಿರುವು ದರಿಂದ ರಾಜ್ಯದಲ್ಲಿಯ ಆಡಳಿತ ಪಕ್ಷವು ನಮ್ಮ ನಾಯಕರಿಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಿದೆ. ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪ್ರತೀಕಾರ ಕ್ರಮವಾಗಿದೆ. ನಾವೂ ಈ ಕುರಿತು ಕಾನೂನುಬದ್ಧ ಹೋರಾಟ ನಡೆಸುತ್ತೇವೆ ಮತ್ತು ಚಿಂತೆ ಪಡುವ ಕಾರಣಗಳಿಲ್ಲ ಎಂದರು.







