ದಂಡುಪಾಳ್ಯ ತಂಡಕ್ಕೆ ಗಲ್ಲು ಶಿಕ್ಷೆ ರದ್ದು

ಬೆಂಗಳೂರು, ಜು.20: ಹುಬ್ಬಳ್ಳಿಯಲ್ಲಿ ಹದಿನೇಳು ವರ್ಷಗಳ ಹಿಂದೆ ನಡೆದಿದ್ದ ಜೋಡಿ ಕೊಲೆ ಪ್ರಕರಣ ಸಂಬಂಧ ಕುಖ್ಯಾತ ದಂಡುಪಾಳ್ಯದ ತಂಡದ ನಾಲ್ವರು ಸದಸ್ಯರಿಗೆ ಅಧೀನ ನಾಯಾಲಯದಿಂದ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿ ಗುರುವಾರ ಆದೇಶ ನೀಡಿದೆ.
ಹುಬ್ಬಳ್ಳಿಯ ನಿವಾಸಿಗಳಾದ ಡಾ.ಪ್ರಭಾಕರ ಮತ್ತವರ ಪುತ್ರ ನೀಲಕಂಠ ಜೋಷಿ ಎಂಬವರ ಕೊಲೆ ಆರೋಪದಲ್ಲಿ ದಂಡುಪಾಳ್ಯ ತಂಡದ ಸದಸ್ಯರಾದ ವೆಂಕಟೇಶ್, ಮುನಿಕೃಷ್ಣ , ನಲ್ಲತಿಮ್ಮ ಮತ್ತು ಲಕ್ಷ್ಮಮ್ಮ ಅವರನ್ನು ದೋಷಿಗಳೆಂದು ಪರಿಗಣಿಸಿ ಗಲ್ಲು ವಿಧಿಸಿದ ನಗರದ 34ನೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಕಾಯಂಗೊಳಿಸುವಂತೆ ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರು ಕ್ರಿಮಿನಲ್ ರೆಫರ್ಡ್ ಕೇಸ್ ಅರ್ಜಿ ಸಲ್ಲಿಸಿದ್ದರು.
ಗುರುವಾರ ಈ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ರವಿ ಮಳಿಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠವು ಅರ್ಜಿ ತಿರಸ್ಕರಿಸಿ, ದಂಡುಪಾಳ್ಯ ತಂಡದ ಈ ನಾಲ್ವರು ಸದಸ್ಯರನ್ನು ಪ್ರಕರಣದಲ್ಲಿ ನಿರ್ದೋಷಿಗಳೆಂದು ತೀರ್ಮಾನಿಸಿತು. ಅಲ್ಲದೆ, ಈ ನಾಲ್ವರಿಗೂ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆ ರದ್ದುಪಡಿಸಿತು. ಇದೇ ವೇಳೆ ಅಧೀನ ನ್ಯಾಯಾಲಯ ಆದೇಶ ಪ್ರಶ್ನಿಸಿ ವೆಂಕಟೇಶ್ ಮತ್ತು ಮುನಿಕೃಷ್ಣ ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿತು. ಮತ್ತೊಂದೆಡೆ ತಮಗೆ ವಿಧಿಸಿದ ಗಲ್ಲು ಶಿಕ್ಷೆ ಪ್ರಶ್ನಿಸಿ ನಲ್ಲತಿಮ್ಮ ಮತ್ತು ಲಕ್ಷ್ಮೀ ಪ್ರತ್ಯೇಕ ಮೇಲ್ಮನವಿ ಸಲ್ಲಿಸದಿದ್ದರೂ ಅಧೀನ ನ್ಯಾಯಾಲಯದ ತೀರ್ಪು ರದ್ದುಪಡಿಸುತ್ತಿರುವುದರಿಂದ ಈ ಇಬ್ಬರೂ ಪ್ರಕರಣದಲ್ಲಿ ಖುಲಾಸೆಗೊಂಡಂತೆ ಎಂದು ವಿಭಾಗೀಯ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಹುಬ್ಬಳ್ಳಿಯ ಸಿಟಿ ಮಾರುಕಟ್ಟೆಯ ಸಮೀಪದ ಮನೆಯೊಂದರಲ್ಲಿ ಡಾ.ಪ್ರಭಾಕರ ಮತ್ತವರ ಪುತ್ರ ನೀಲಕಂಠ ಜೋಷಿ ಎಂಬವರು 2000ರ ಮಾರ್ಚ್ 14ರಂದು ಕೊಲೆಯಾಗಿದ್ದರು. ಈ ಸಂಬಂಧ ಹುಬ್ಬಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. 2001ರ ಎ.9ರಂದು ನಲ್ಲತಿಮ್ಮ ಮತ್ತು ಲಕ್ಷ್ಮಮ್ಮ ಅವರನ್ನು ಪೊಲೀಸರ ಬಂಧನಕ್ಕೊಳಗಾಗಿದ್ದರು. ಅವರನ್ನು ವಿಚಾರಣೆಗೊಳಪಡಿಸಿದಾಗ, ನೀಲಕಂಠ ಜೋಷಿ ಮತ್ತು ಡಾ.ಪ್ರಭಾಕರ ಅವರ ಕೊಲೆ ಪ್ರಕರಣದ ಬಗ್ಗೆ ಬಾಯ್ದಿಟ್ಟಿದ್ದರು ಎನ್ನಲಾಗಿತ್ತು. ಹೀಗಾಗಿ, ವೆಂಕಟೇಶ್, ಮುನಿಕೃಷ್ಣ, ನಲ್ಲತಿಮ್ಮ ಮತ್ತು ಲಕ್ಷಮ್ಮ ವಿರುದ್ಧ ಹುಬ್ಬಳ್ಳಿ ಠಾಣಾ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 2010ರ ಜುಲೈ 17ರಂದು ಪ್ರಕರಣದಲ್ಲಿ ಈ ನಾಲ್ವರನ್ನು ದೋಷಿ ಎಂದು ಪರಿಗಣಿಸಿದ್ದ ಅಧೀನ ನ್ಯಾಯಾಲಯವು 2010ರ ಸೆ.30ರಂದು ಗಲ್ಲು ವಿಧಿಸಿತ್ತು. ಇದೀಗ ಹೈಕೋರ್ಟ್ ನಾಲ್ವರನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿದೆ.
ಈ ನಾಲ್ವರು ಆರೋಪಿಗಳೇ ಡಾ.ಪ್ರಭಾಕರ್ ಮತ್ತು ನೀಲಕಂಠ ಅವರನ್ನು ಕೊಲೆ ಮಾಡಿರುವುದನ್ನು ದೃಢಪಡಿಸುವ ಪ್ರತ್ಯಕ್ಷ ದರ್ಶಿಗಳು ಇಲ್ಲವಾಗಿದೆ. ಹಾಗೂ ಕೊಲೆ ನಡೆಸಿರುವುದನ್ನು ಖಚಿತಪಡಿಸುವ ಸಾಂದರ್ಭಿಕ ಹಾಗೂ ವೈದ್ಯಕೀಯ ಸಾಕ್ಷ್ಯಾಧಾರಗಳು ಇಲ್ಲ. ಕೇವಲ ಆರೋಪಿಗಳ ಹೇಳಿಕೆ ಆಧರಿಸಿ ಮೇಲೆ ಗಲ್ಲು ವಿಧಿಸಿರುವುದು ಸರಿಯಲ್ಲ. ಕೊಲೆಯಾದವರ ಬಾಯಿಗೆ ಸುತ್ತಿದ್ದ ಟೇಪ್‌ನ್ನೂ ಬೆಳರಚ್ಚು ತಜ್ಞರು ತೆಗೆದಿಲ್ಲ. ಆ ಟೇಪ್ ಮೇಲಿನ ಕೈ ಬೆರಳಚ್ಚು ಹಾಗೂ ದಂಡಪಾಳ್ಯದ ತಂಡದ ಈ ನಾಲ್ವರು ಕೈಬೆರಳಚ್ಚುಗಳಿಗೆ ಹೊಂದಾಣಿಕೆ ಇಲ್ಲ. ಕೊಲೆಯಾದವರ ಮನೆಯಲ್ಲಿ ಯಾವುದೇ ಹಣ ಅಥವಾ ಚಿನ್ನಾಭರಣಗಳು ದರೋಡೆಯಾಗಿಲ್ಲ. ಆರೋಪಿಗಳ ಕೃತ್ಯವನ್ನು ಅಗತ್ಯ ಸಾಕ್ಷ್ಯಾಧಾರಗಳೊಂದಿಗೆ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಹೀಗಾಗಿ, ಪ್ರಕರಣ ಗಲ್ಲು ಶಿಕ್ಷೆ ರದ್ದುಪಡಿಸಲು ಅರ್ಹ ಎಂದು ನ್ಯಾಯಪೀಠ ತೀರ್ಪು ನೀಡಿತು.







