ಲೀಹ್ಯೂನ್‌ಗೆ ಕಶ್ಯಪ್ ಶಾಕ್ ಸಮೀರ್ ಶುಭಾರಂಭ
ಯುಎಸ್ ಓಪನ್ ಜಿಪಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿ

ಅನಾಹೆಮ್(ಅಮೆರಿಕ), ಜು.20: ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪಿ.ಕಶ್ಯಪ್ ಯುಎಸ್ ಓಪನ್ ಜಿಪಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್‌ನಲ್ಲಿ ಕೊರಿಯಾದ ಲೀ ಹ್ಯೂನ್‌ರನ್ನು ಮಣಿಸಿ ಶಾಕ್ ನೀಡಿದರು.
ಗುರುವಾರ ಇಲ್ಲಿ ಒಂದು ಗಂಟೆ, 3 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಕಶ್ಯಪ್ ವಿಶ್ವದ ನಂ.15ನೆ ಆಟಗಾರ ಲೀ ಅವರನ್ನು 21-16, 10-21, 21-19 ಗೇಮ್‌ಗಳ ಅಂತರದಿಂದ ಮಣಿಸಿದರು.ಮತ್ತೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಐದನೆ ಶ್ರೇಯಾಂಕದ ಸಮೀರ್ ವರ್ಮ ವಿಯೆಟ್ನಾಂ ನ ಹೊಯಾಂಗ್ ನ್ಯಾಮ್ ಗುಯೆನ್‌ರನ್ನು 21-5, 21-10 ಗೇಮ್‌ಗಳ ಅಂತರದಿಂದ ಮಣಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.
ದ್ವಿತೀಯ ಶ್ರೇಯಾಂಕದ ಎಚ್.ಎಸ್. ಪ್ರಣಯ್, ಹರ್ಷಿಲ್ ಡ್ಯಾನಿ ಎರಡನೆ ಸುತ್ತು ಪ್ರವೇಶಿಸಿದ್ದಾರೆ. ಪ್ರಣಯ್ ಆಸ್ಟ್ರೀಯದ ಲುಕಾ ವ್ರಾಬೆರ್‌ರನ್ನು 21-12, 21-16 ಗೇಮ್‌ಗಳ ಅಂತರದಿಂದ ಮಣಿಸಿದರು. ಹರ್ಷಿಲ್ ಮೆಕ್ಸಿಕೊದ ಅರ್ಟುರೊ ಹೆರ್ನಾಂಡೆಝ್‌ರನ್ನು 21-13, 21-19 ರಿಂದ ಮಣಿಸಿದರು.
ವಿಶ್ವದ ನಂ.59ನೆ ಆಟಗಾರ ಕಶ್ಯಪ್ ಮುಂದಿನ ಸುತ್ತಿನ ಪಂದ್ಯದಲ್ಲಿ ಹಂಗೇರಿಯದ ಗೆರ್ಗ್‌ಲಿ ಕ್ರೌಸೆಝ್‌ರನ್ನು, ಸಮೀರ್ ಕ್ರೊಯೇಷಿಯದ ರೊನಿಮಿರ್ ಡುರ್ಕಿಂಜಾಕ್‌ರನ್ನು ಹಾಗೂ ಪ್ರಣಯ್ ಐರ್ಲೆಂಡ್‌ನ ಜೊಶುವಾರನ್ನು ಎದುರಿಸಲಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ರಿತುಪರ್ಣೊ ದಾಸ್ ಕೆನಡಾದ ರಾಚೆಲ್ ಹೊಂಡೆರಿಚ್‌ರನ್ನು 21-16, 21-18 ಅಂತರದಿಂದಲೂ, ಶ್ರೀಕೃಷ್ಣ ಪ್ರಿಯಾ ಅವರು ಅಮೆರಿಕದ ಮಯಾ ಚೆನ್‌ರನ್ನು 21-13, 21-16 ಗೇಮ್‌ಗಳ ಅಂತರದಿಂದಲೂ ಸೋಲಿಸಿದ್ದಾರೆ.
ಲಕ್ನೀ ಸಾರಂಗ್, ಅಭಿಷೇಕ್ ಯೆಲೆಗಾರ್, ಸಾಯಿ ಉತ್ತೇಜಿತ್ ರಾವ್, ರೇಶ್ಮಾ ಕಾರ್ತಿಕ್ ಹಾಗೂ ಋತ್ವಿಕಾ ಶಿವಾನಿ ಮೊದಲ ಸುತ್ತಿನಲ್ಲಿ ಮುಗ್ಗರಿಸಿದರು.
ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಹಾಗೂ ಬಿ.ಸುಮೀತ್ ರೆಡ್ಡಿ ಕೆನಡದ ಜೇಸನ್ ಅಂಥೊನಿ ಹಾಗೂ ಯಾಕುರರನ್ನು 21-15, 21-19 ಅಂತರದಿಂದಲೂ, ಫ್ರಾನ್ಸಿಸ್ ಅಲ್ವಿನ್ ಹಾಗೂ ತರುಣ್ ಕೊನಾ ಜೋಡಿ ಅಮೆರಿಕದ ಯಾನ್ ಟಕ್ ಚಾನ್ ಹಾಗೂ ಬ್ರಿಯನ್ ಚೀ ಚೆಂಗ್‌ರನ್ನು 21-3, 21-10 ರಿಂದಲೂ ಸೋಲಿಸಿದ್ದಾರೆ.
ಮಹಿಳೆಯರ ಡಬಲ್ಸ್ ಜೋಡಿ ಮೇಘನಾ ಹಾಗೂ ಪೂರ್ವಿಶಾ ರಾಮ್ ಜಪಾನ್‌ನ ಕವಾಶಿಮಾ ಹಾಗೂ ಸರೊರಿ ಒಝಾಕಿ ಅವರನ್ನು 21-16, 14-21, 21-14 ಗೇಮ್‌ಗಳ ಅಂತರದಿಂದ ಸೋಲಿಸಿ ಗೆಲುವಿನ ಆರಂಭ ಪಡೆದಿದ್ದಾರೆ.
ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಮನು ಹಾಗೂ ಮನೀಶಾ ಕೆನಡಾದ ಯಕುರಾ ಹಾಗೂ ಬ್ರಿಟ್ನಿ ಟಾಮ್‌ರನ್ನು 21-13, 21-15 ರಿಂದ ಸೋಲಿಸಿದ್ದಾರೆ.
3ನೆ ಶ್ರೇಯಾಂಕದ ಪ್ರಣವ್ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ ಇಂಗ್ಲೆಂಡ್‌ನ ಬೆನ್ ಲಾನ್ ಹಾಗೂ ಜೆಸ್ಸಿಕಾ ವಿರುದ್ಧ 21-19, 19-21, 17-21 ರಿಂದ ಸೋತಿದ್ದಾರೆ.







