ಭಟ್ಕಳ: ಹೊಳೆಯಲ್ಲಿ ಈಜಿಗಿಳಿದ ಇಬ್ಬರು ಯುವಕರು ಗಂಭೀರ
ಭಟ್ಕಳ, ಜು.21: ಈಜಲು ತೆರಳಿದ ಯುವಕರಿಬ್ಬರು ಹೊಳೆ ದಡದಿಂದ ಜಿಗಿಯುವ ಸಂದರ್ಭದಲ್ಲಿ ಒಬ್ಬನ ಮೇಲೆ ಮತ್ತೊಬ್ಬ ಜಿಗಿದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ಅಪರೂಪದ ಘಟನೆ ಶಿರಾಲಿಯ ಹೊಳೆಯಲ್ಲಿ ಜರಗಿದೆ. ಗಾಯಗೊಂಡವರನ್ನು ಬದ್ರಿಯಾ ಕಾಲೋನಿ ನಿವಾಸಿ ಶುಐಬ್ ಶೇಖ್(20) ಹಾಗೂ ಜಾಲಿ ಪ.ಪಂ ವ್ಯಾಪ್ತಿಯ ಮುಹಿದ್ದೀನ್ ಮರ್ವಾನ್(19) ಎಂದುಗುರುತಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ವಿವರ: ಮಳೆಗಾಲದ ಸಂದರ್ಭದಲ್ಲಿ ಇಲ್ಲಿನ ಹೆಚ್ಚಿನ ಯುವಕರು, ವಿದ್ಯಾರ್ಥಿಗಳು ಈಜಲು ಹೊಳೆ, ನದಿ ಸಮುದ್ರಕ್ಕೆ ಹೋಗುತ್ತಿದ್ದು, ಅಲ್ಲಿ ಈಜುವ ಭರದಲ್ಲಿ ಅಪಾಯಗಳನ್ನು ತಮ್ಮ ಮೈಮೇಲೆ ಎಳೆದುಕೊಳ್ಳುತ್ತಾರೆ. ಇಂತಹ ಹಲವು ಘಟನೆಗಳು ಘಟಿಸಿದ್ದು ಜೀವ ಹಾನಿಯೂ ಸಂಭವಿಸಿದೆ.
ಗುರುವಾರ ಈಜಲು ಶಿರಾಲಿ ಹೊಳೆಗೆ ಹೋಗಿರುವ ಯುವಕರು ಅಲ್ಲಿ ದಡದಿಂದ ನದಿಯಲ್ಲಿ ಡೈವ್ ಧುಮುಕುವ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಶುಐಬ್ ಶೇಖ್‌ಎಂಬಾತನ ಬೆನ್ನೆಲುಬು ಹೊಡೆತ ಬಿದ್ದು ಇದರಿಂದ ದೇಹದ ಕೆಳಗಿನ ಭಾಗ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ. ಮರ್ವಾನ್ ಎಂಬಾತನಿಗೆ ಕಣ್ಣು ಹಾಗು ಒಂದು ನರದಲ್ಲಿ ತೊಂದರೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.







