ಕೆರೆಯಂಗಳದಲ್ಲಿ ಮಲಗುವ ಮೂಲಕ ಪ್ರತಿಭಟನೆ

ಮದ್ದೂರು, ಜು.21: ಕಾವೇರಿ ಕೊಳ್ಳದ ನಾಲೆಗಳಿಗೆ ನೀರುಹರಿಸಲು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ತಾಲೂಕಿನ ದೇಶಹಳ್ಳಿ ಕೆರೆಯಲ್ಲಿನ ಧರಣಿ ಮುಂದುವರಿದಿದ್ದು, 15ನೆ ದಿನವಾದ ಶುಕ್ರವಾರ ಕೆರೆಯಂಗಳದಲ್ಲಿ ಮಲಗುವ ಮೂಲಕ ಪ್ರತಿಭಟಿಸಲಾಯಿತು.
ದೇಶಹಳ್ಳಿ, ವಳೆಗೆರೆಹಳ್ಳಿ ಗ್ರಾಮಸ್ಥರು ಕೆರೆಯಂಗಳದಲ್ಲಿ ಮಲಗಿ ಮಳೆಗಾಗಿ ಪ್ರಾರ್ಥಿಸಿದರಲ್ಲದೆ, ನಾಲೆಗೆ ನೀರುಹರಿಸಲು ಮುಂದಾಗದಿರುವ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವೇದಿಕೆ ರಾಜ್ಯಾಧ್ಯಕ್ಷ ರಮೇಶಗೌಡ ಮಾತನಾಡಿ, ಹದಿನೈದು ದಿನದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರಕಾರ, ಜಿಲ್ಲಾಡಳಿತ ಕಿವಿಗೊಡುತ್ತಿಲ್ಲ. ಚಳವಳಿಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಬೆಂಗಳೂರು ನಗರ ಕಸಾಪ ಅಧ್ಯಕ್ಷ ಮಾಯಣ್ಣ, ತಿಮ್ಮೇಗೌಡ, ಸತೀಶ್‌ಗೌಡ, ಬಿ.ಟಿ.ಶ್ರೀನಿವಾಸಗೌಡ, ವೆಂಕಟೇಶ್, ನಗರಕೆರೆ ಗ್ರಾಪಂ ಮಾಜಿ ಅಧ್ಯಕ್ಷ ನ.ಲಿ.ಕೃಷ್ಣ, ಪುರುಷೋತ್ತಮ್, ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಗುಂಡ ಮಹೇಶ್, ಸುನೀಲ್, ಇಂದು, ಲೋಕೇಶ್, ವಳೆಗೆರೆಹಳ್ಳಿ ಸ್ನೇಹಜೀವಿ ಬಳಗದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.





