ಪ್ರಕರಣ ವಿಲೇವಾರಿಗೊಳಿಸಿದ ಹೈಕೋರ್ಟ್
ಶ್ರೀರಾಮಚಂದ್ರಾಪುರ ಮಠದ ಕಟ್ಟಡ ನಿರ್ಮಾಣ ವಿವಾದ

ಬೆಂಗಳೂರು, ಜು.21: ಗಿರಿನಗರದ ಶ್ರೀರಾಮಚಂದ್ರಾಪುರ ಮಠದ ಜಾಗಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣವನ್ನು ವಿಲೇವಾರಿ ಮಾಡಿ ಆದೇಶಿಸಿದೆ. ಹಿಂದಿನ ಬಿಡಿಎ ಆಯುಕ್ತರಾಗಿದ್ದ ಶ್ಯಾಂಭಟ್ ಅವರ ಮೌಖಿಕ ಆದೇಶದಂತೆ ಬಿಬಿಎಂಪಿಗೆ ಪತ್ರ ಬರೆದು, ನಕ್ಷೆ ಹಿಂಪಡೆಯಲು ಸೂಚಿಸಿದ್ದಾಗಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದ ಬಿಡಿಎ ಮಾಜಿ ಎಂಜಿನಿಯರ್ ರಾಜಗೋಪಾಲ್ ಶುಕ್ರವಾರ ನ್ಯಾಯಮೂರ್ತಿ ವಿನಿತ್ ಕೊಠಾರಿ ಅವರ ನ್ಯಾಯಪೀಠದ ಮುಂದೆ ಹಾಜರಾಗಿ ಈ ಕುರಿತಾಗಿ ಅಫಿಡವಿಟ್ ಸಲ್ಲಿಸಿದರು.
ಈಗಾಗಲೇ ಕಟ್ಟಡದ ನಕ್ಷೆ ಹಿಂಪಡೆದಿರುವ ತನ್ನ ಆದೇಶವನ್ನು ಬಿಬಿಎಂಪಿ ಹಿಂಪಡೆದಿರುವುದರಿಂದ, ಪ್ರಸ್ತುತ ಅರ್ಜಿಯ ವಿಚಾರಣೆಯನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಪ್ರಕರಣವನ್ನು ವಿಲೇವಾರಿ ಮಾಡಿ ಆದೇಶಿಸಿತು.
ಶ್ರೀರಾಮಚಂದ್ರಾಪುರ ಮಠದ ಗಿರಿನಗರದ ಜಾಗದ ಕುರಿತು ಹೊಸದಾಗಿ ತನಿಖೆ ಮಾಡುತ್ತೇವೆ ಎಂದು ಬಿಬಿಎಂಪಿ ಪರ ವಕೀಲರು ನ್ಯಾಯಾಲಯವನ್ನು ಕೇಳಿದ್ದಕ್ಕೆ 1978ರಲ್ಲಿ ಕ್ರಯಪತ್ರದ ಮೂಲಕ ನೋಂದಾಯಿತವಾದ ಹಾಗೂ ಕಂದಾಯ ಕಟ್ಟಿ, ಖಾತೆಯಾಗಿ, ಅನುಭೋಗದಲ್ಲಿರುವ ಜಾಗದ ಕುರಿತು ಯಾವ ನೆಲೆಯಲ್ಲಿ ತನಿಖೆ ಮಾಡುತ್ತೀರಿ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡ ಪ್ರಕರಣ ನಡೆಯಿತು.





